2-3 ದಿನಗಳಲ್ಲಿ ಹೊಸೂರು ವೃತ್ತದಲ್ಲಿ ವಾಹನ ಸಂಚಾರ ಭಾಗಶಃ ಸ್ಥಗಿತ.
ಕಟ್ಟಡ ನೆಲಸಮ ತಡವಾದರೆ ಫ್ಲೈ ಓವರ್ ಕಾಮಗಾರಿಗೆ ಸಮಸ್ಯೆ.
ಮನೆ ಖಾಲಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಲೋಕೋಪಯೋಗಿ ಇಲಾಖೆ (ರಾಷ್ಟ್ರೀಯ ಹೆದ್ದಾರಿ), ಪೊಲೀಸ್, ಮಹಾನಗರ ಪಾಲಿಕೆ ಹಾಗೂ ಇನ್ನಿತರ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಈ ವಿಷಯ ತಿಳಿಸಿದರು.
ಫ್ಲೈಓವರ್ ಕಾಮಗಾರಿ ಹಿನ್ನೆಲೆಯಲ್ಲಿ ಹೊಸೂರು ವೃತ್ತದಲ್ಲಿ ಎರಡು ತಿಂಗಳವರೆಗೆ ವಾಹನಗಳ ಸಂಚಾರವನ್ನು ಭಾಗಶಃ ಸ್ಥಗಿತಗೊಳಿಸಲಾಗುವುದು. ಹಳೇ ಬಸ್ ನಿಲ್ದಾಣದಿಂದ ಧಾರವಾಡ ಕಡೆಗೆ ಸಂಚರಿಸುವ ವಾಹನಗಳು ಇಂದಿರಾ ಗಾಜಿನ ಮನೆ, ಕಾರವಾರ ರಸ್ತೆ, ವಾಣಿ ವಿಲಾಸ ವೃತ್ತದ ಮೂಲಕ ಎಂ.ಎಂ. ಜೋಶಿ ಆಸ್ಪತ್ರೆ ಮಾರ್ಗವಾಗಿ ಏಕಮುಖವಾಗಿ ಸಂಚರಿಸಲಿವೆ. ಧಾರವಾಡದಿಂದ ಬರುವ ವಾಹನಗಳು ಈ ಮೊದಲಿನಂತೆ ಸಂಚರಿಸುತ್ತವೆ ಎಂದರು.
ಉಪ ನಗರ ಪೊಲೀಸ್ ಠಾಣೆ ಕಟ್ಟಡ ತೆರವುಗೊಳಿಸಲು ನೀಡಿದ್ದ ಗಡವು ಮುಗಿದು 4 ತಿಂಗಳಾದರೂ, ಕಟ್ಟಡದಲ್ಲಿನ ಕಚೇರಿಗಳು ಸಂಪೂರ್ಣ ಸ್ಥಳಾಂತರಗೊಳ್ಳದಿರುವುದಕ್ಕೆ ಇದೇ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ಸ್ಪಷ್ಟನೆ ನೀಡಿದ ಸಂಚಾರ ಎಸಿಪಿ ವೀರೇಶ, ಕಟ್ಟಡದಲ್ಲಿನ ಮೂರು ಕಚೇರಿಗಳು ಈಗಾಗಲೇ ಸ್ಥಳಾಂತರಗೊಂಡಿವೆ. ವಾಕಿಟಾಕಿ ಕೇಬಲ್ ಇರುವುದರಿಂದ ತಡವಾಗಿದೆ ಎಂದು ಹೇಳಿದರು.
2-3 ದಿನಗಳಲ್ಲಿ ಸಂಪೂರ್ಣ ತೆರವುಗೊಳಿಸಬೇಕು ಎಂದು ಗಡವು ನೀಡಿದ ಶಾಸಕ ಟೆಂಗಿನಕಾಯಿ, ಕಟ್ಟಡ ನೆಲಸಮ ತಡವಾದರೆ ಫ್ಲೈ ಓವರ್ ಕಾಮಗಾರಿಗೆ ಸಮಸ್ಯೆ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಧಾರವಾಡ ಮಾರ್ಗದಲ್ಲಿ ಕಾಮಗಾರಿಗಾಗಿ ಕೆನರಾ ಹೋಟೆಲ್ ಎದುರಿನ ಬಿಆರ್ಟಿಎಸ್ ನಿಲ್ದಾಣವನ್ನು ತೆರವುಗೊಳಿಸಲಾಗುವುದು ಎಂಬ ಲೋಕೋಪಯೋಗಿ ಇಲಾಖೆ (ಎನ್ಎಚ್) ಅಧೀಕ್ಷಕ ಇಂಜಿನಿಯರ್ ಪ್ರಸಾದ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಾರಿಗೆ ಇಲಾಖೆ ಅಧಿಕಾರಿ ವಿವೇಕಾನಂದ ವಿಶ್ವಜ್ಞ, ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.
ಫ್ಲೈ ಓವರ್ ಕಾಮಗಾರಿ ಪೂರ್ಣಗೊಂಡ ನಂತರ ಬಿಆರ್ಟಿಎಸ್ಗೆ ಹೊಸ ಬಸ್ ನಿಲ್ದಾಣ ನಿರ್ವಿುಸಿಕೊಡಲಾಗುವುದು ಎಂದು ಎಸ್ಇ ಪ್ರಸಾದ ತಿಳಿಸಿದರು.
ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ತಹಸೀಲ್ದಾರ ಮಹೇಶ ಗಸ್ತೆ, ಬಿಆರ್ಟಿಎಸ್ ಎಂಡಿ ಸಾವಿತ್ರಿ ಕಡಿ, ಲೋಕೋಪಯೋಗಿ ಇಲಾಖೆ (ಎನ್ಎಚ್) ಎಇಇ ಸತೀಶ ನಾಗನೂರ, ಇನ್ನಿತರರು ಇದ್ದರು.
ಜೈ ಹನುಮಾನ ನಗರದಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ಜಿ ಪ್ಲಸ್ 3 ಮಾದರಿಯ 128 ಮನೆಗಳನ್ನು ನಿರ್ವಿುಸಲು 2023ರಲ್ಲಿಯೇ ಭೂಮಿಪೂಜೆ ಮಾಡಿದ್ದರೂ, ಇದುವರೆಗೆ ಕಾಮಗಾರಿ ಆರಂಭಗೊಳ್ಳದಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಅಧಿಕಾರಿಗಳನ್ನು ತೆಗೆದುಕೊಂಡರು.
ಈ ಮೊದಲು ಆ ಜಾಗದಲ್ಲಿ 102 ಕಚ್ಚಾ ಮನೆಗಳಿದ್ದವು. ಅವುಗಳನ್ನು ತೆರವುಗೊಳಿಸಿ, 128 ಮನೆಗಳನ್ನು ನಿರ್ವಿುಸಲಾಗುತ್ತದೆ. ಹೊಸ ಮನೆಗಳಿಗೆ 86 ಜನ ತಲಾ 50 ಸಾವಿರ ರೂ. ತಮ್ಮ ಪಾಲಿನ ವಂತಿಗೆ ಪಾವತಿಸಿದ್ದಾರೆ. ಆದರೆ, ಇನ್ನುಳಿದವರು ಮನೆ ಖಾಲಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ತಕ್ಷಣ ಪೊಲೀಸ್ ಭದ್ರತೆ ಪಡೆದು, ಅಲ್ಲಿನ ಕಚ್ಚಾ ಮನೆಗಳನ್ನು ನೆಲಸಮಗೊಳಿಸುವಂತೆ ಸ್ಲಂ ಬೋರ್ಡ್ ಅಧಿಕಾರಿಗಳಿಗೆ ಸೂಚಿಸಿದರು.