ಹುಬ್ಬಳ್ಳಿ: ಮಾಹಿತಿ ಹಕ್ಕು ಕಾಯ್ದೆ (RTI) ಕಾರ್ಯಕರ್ತರೆಂದು ಹೇಳಿಕೊಂಡು ಸುಲಿಗೆ ಮಾಡುತ್ತಿದ್ದ ಆರೋಪದ ಮೇರೆಗೆ ಗ್ಯಾಂಗ್‌ವೊಂದರ ಐವರನ್ನು ಇಲ್ಲಿಯ ಗೋಕುಲ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗೋಕುಲ ರಸ್ತೆಯಲ್ಲಿರುವ ಸಮೃದ್ಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಸೇಲ್ಸ್ ಹೆಡ್ ಮತ್ತು ಮ್ಯಾನೇಜರ್‌ಗಳಿಗೆ ಗದಗದ ಮೂಲದ ಮಂಜುನಾಥ ಹದ್ದಣ್ಣನವರ ಎಂಬಾತ ಸೊಸೈಟಿಯ ವಿರುದ್ಧ ಸುಳ್ಳು ಆರೋಪ ಮಾಡಿ ಬೆದರಿಕೆಯೊಡ್ಡುತ್ತಿದ್ದ.
1.5 ಕೋಟಿ ರೂ. ಬೇಡಿಕೆ ಇಟ್ಟಿದ್ದರ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಂಜುನಾಥ ಹದ್ದಣ್ಣವರ, ಮುಂಡಗೋಡ ಮೂಲದ ವೀರೇಶಕುಮಾರ ಲಿಂಗದಾಳ, ಮಹದೇಶ್ವರ ಲಿಂಗದಾಳ, ಮಹಾಬಲೇಶ್ವರ ಶಿರೂರ, ಶಿವಪ್ಪ ಬೊಮ್ಮನಹಳ್ಳಿಯನ್ನು ಬಂಧಿಸಲಾಗಿದೆ.
ಬಂಧಿತರಿಂದ 1.70 ಲಕ್ಷ ರೂ. ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇವರೆಲ್ಲರೂ ಅಡ್ವಾನ್ಸ್ ಹಣಕ್ಕೆ ಬೇಡಿಕೆ ಇಟ್ಟು ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಇನ್ನೂ ನಾಲ್ವರು ಆರೋಪಿಗಳು ಶಾಮೀಲಾಗಿರುವ ಶಂಕೆ ಇದ್ದು, ಬಂಧನಕ್ಕೆ ನಮ್ಮ ಪೊಲೀಸ್ ತಂಡ ಸಿದ್ಧವಾಗಿದೆ ಎಂದರು.