ಫೈರಿಂಗ್​ ಪ್ರಕರಣದ ಐವರು ಆರೋಪಿಗಳ ಬಂಧನ

ಫೈರಿಂಗ್ ಪ್ರಕರಣದ ಆರೋಪಿಗಳು
ಫೈರಿಂಗ್ ಪ್ರಕರಣದ ಆರೋಪಿಗಳು
Published on
ಧಾರವಾಡ: ನಗರ ಹೊರವಲಯದ ತಡಸಿನಕೊಪ್ಪ ಸರಹದ್ದಿನ ಜಮೀನಿನಲ್ಲಿ ನಡೆದ ಫೈರಿಂಗ್​ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸ್​ ಆಯುಕ್ತ ಎನ್​. ಶಶಿಕುಮಾರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಿಲೋಮಿನಾ, ಪ್ರವಿಣ ಸುತಾರ, ಇಂದ್ರಪಾಲ್​ ಸಿಂಗ್​, ಬೆಂಜಮಿನ್​, ವಿಶಾಲ ಜಾಧವ ಎಂಬುವರನ್ನು ಬಂಧಿಸಲಾಗಿದೆ. ತಡಸಿನಕೊಪ್ಪದ ವಿವಾದಿತ ಜಮೀನೊಂದರಲ್ಲಿ ಮಧ್ಯಾಹ್ನ ಸಂಘರ್ಷ ನಡೆದಿತ್ತು. ಆರೋಪಿಗಳು ತಾವು ಆ ಜಮೀನು ಖರೀದಿ ಮಾಡಿದ್ದೇವೆ ಎಂದು ಹೇಳಿ ಜೆಸಿಬಿ ಬಳಸಿ ಸಮತಟ್ಟು ಮಾಡುತ್ತಿದ್ದರು. ಈ ವೇಳೆ ವಾಲೀಕಾರ ಕುಟುಂಬದವರು ಕೆಲಸಕ್ಕೆ ತಡೆಯೊಡ್ಡಲು ಯತ್ನಿಸಿದ್ದರು. ಈ ವೇಳೆ ಆರೋಪಿಗಳು ಪಿಸ್ತೂಲ್​ ಮತ್ತು ರಿವಾಲ್ವರ್​ಗಳಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಪರಸ್ಪರ ಗಲಾಟೆಯಲ್ಲಿ ವಿಠ್ಠಲ ವಾಲೀಕಾರ ಎಂಬಾತನ ಪಾದಕ್ಕೆ ಗುಂಡು ಬಿದ್ದು ಗಾಯಗೊಂಡಿದ್ದ. ಈ ಕುರಿತು ದೂರು ನೀಡಿದ್ದ ಗಾಯಾಳು ಸಂಬಂಧಿಕರು ಅಂಗರಕ್ಷಕರ ಬಳಿ ಇದ್ದ ಪಿಸ್ತೂಲ್​ ಬಳಸಿ ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದ್ದರು ಎಂದರು.
ವಿದ್ಯಾಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ್ದರು. ಕೊಲೆ ಯತ್ನ ಮತ್ತು ಜಾತಿ ನಿಂದನೆ ಮಾಡಿದ ಆರೋಪದಡಿ ಐವರನ್ನು ಬಂಧಿಸಲಾಗಿದೆ. ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪ್ರವಿಣ ಸುತಾರ ಹಾಗೂ ಸುಂದರ್​ ಪಾಲ್​ ಎಂಬುವರು ಗುಂಡು ಹಾರಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಪ್ರವಿಣ ಸುತಾರ ತನ್ನದೆ ಪಿಸ್ತೂಲ್​ನಿಂದ ಗುಂಡು ಹಾರಿಸಿದ್ದು, ಆತನನ್ನು ಬಂಧಿಸಲಾಗಿದೆ. ಅಂಗರಕ್ಷಕ ಇಂದರ್​ಪಾಲ್​ ರಿವಾಲ್ವಾರ್​ನಿಂದ ಗುಂಡು ಹಾರಿಸಿದ್ದ ಸುಂದರ್​ ಪಾಲ್​ ಪರಾರಿಯಾಗಿದ್ದಾನೆ. ಆತ ಪರಾರಿಯಾಗಿದ್ದು, 5 ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net