FID ಕೇಂದ್ರ ಸರ್ಕಾರದಿಂದ ರೈತರಿಗೆ ಗುರುತಿನ ಸಂಖ್ಯೆ

FID
FID
Published on
ವಿವೇಕಾನಂದ ದಾಸನಕೊಪ್ಪ ಹುಬ್ಬಳ್ಳಿ
ರಾಜ್ಯ ಸರ್ಕಾರವು ರೈತರಿಗೆ ನೀಡಿರುವ ರೈತ ನೋಂದಣಿ ಹಾಗೂ ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಫ್ರೂಟ್ಸ್​) ಎಫ್​ಐಡಿ (FID) ಮಾದರಿಯಲ್ಲಿ ಕೇಂದ್ರ ಸರ್ಕಾರವು ನೀಡುತ್ತಿರುವ ಕೇಂದ್ರ ರೈತ ಗುರುತಿನ ಸಂಖ್ಯೆಗಾಗಿ ಇ-ಕೆವೈಸಿ ತೀವ್ರಗತಿಯಲ್ಲಿ ಮಾಡಲಾಗುತ್ತಿದೆ.
ರೈತರಿಗೆ ರಾಜ್ಯ ಸರ್ಕಾರದ ಸೌಲಭ್ಯ ಪಡೆಯಲು ಎಫ್​ಐಡಿ ಕಡ್ಡಾಯವಾಗಿದೆ. ಅದೇ ರೀತಿ ಕೇಂದ್ರ ಸರ್ಕಾರವು ಪಿಎಂ ಕಿಸಾನ್, ರಾಷ್ಟ್ರೀಯ ಆಹಾರ ಭದ್ರತಾ ಮಿಷನ್, ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಸೇರಿದಂತೆ ರೈತರಿಗೆ ಇರುವ ಸೌಲಭ್ಯ ಪಡೆಯಲು ಹಾಗೂ ನೇರ ನಗದು ವರ್ಗಾವಣೆಗಾಗಿ ಕೇಂದ್ರ ರೈತ ಗುರುತಿನ ಸಂಖ್ಯೆ ಕಡ್ಡಾಯಗೊಳಿಸಿದೆ. ರೈತರಿಗೆ 11 ಡಿಜಿಟ್ ಇರುವ ಸಂಖ್ಯೆ ನೀಡಲಿದೆ.
ರಾಜ್ಯದಲ್ಲಿ 1.03 ಕೋಟಿ ರೈತರು ಎಫ್​ಐಡಿ ಹೊಂದಿದ್ದಾರೆ. ಇದರಲ್ಲಿ ಭೂಮಿ ಹೊಂದಿರುವ ಸುಮಾರು 72 ಲಕ್ಷ ಹಾಗೂ ಭೂಮಿ ಹೊಂದಿಲ್ಲದ 30 ಲಕ್ಷಕ್ಕೂ ಅಧಿಕ ಎಫ್​ಐಡಿಗಳಿವೆ.
ಕೇಂದ್ರ ರೈತ ಗುರುತಿನ ಸಂಖ್ಯೆಗಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ರಾಜ್ಯದ ರೈತರ ಮಾಹಿತಿ ನವೀಕರಿಸಲಾಗುತ್ತಿದೆ. ಭೂಮಿ ಹೊಂದಿರುವ ಸುಮಾರು 72 ಲಕ್ಷ ರೈತರ ಎಫ್​ಐಡಿಯಲ್ಲಿ ಆಧಾರ್ ದತ್ತಾಂಶ ಅಳವಡಿಕೆ ಹಾಗೂ ಬಳಕೆಗೆ ಸಹಮತಿ, ಆಧಾರ್​ಗೆ ಜೋಡಣೆ ಆಗಿರುವ ಮೊಬೈಲ್ ಸಂಖ್ಯೆ, ರೈತರ ಹಿಡುವಳಿ ವಿವರದ ಇ-ಕೆವೈಸಿಯನ್ನು ಕೇಂದ್ರ ಸರ್ಕಾರ ಸರ್ಕಾರದ ಸೂಚನೆ ಮೇರೆಗೆ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಗಳು ಆದ್ಯತೆ ಮೇರೆಗೆ ಮಾಡುತ್ತಿವೆ. ಈಗಾಗಲೇ 30 ಲಕ್ಷ ರೈತರ ಇ-ಕೆವೈಸಿ ಆಗಿದ್ದು, ಇನ್ನೂ 42 ಲಕ್ಷ ಬಾಕಿಯಿದೆ.
ರಾಜ್ಯದಲ್ಲಿ 42.89 ಲಕ್ಷಕ್ಕೂ ಅಧಿಕ ಪಿಎಂ ಕಿಸಾನ್ ಫಲಾನುಭವಿಗಳಿದ್ದಾರೆ. ಇದರಲ್ಲಿ ಈಗಾಗಲೇ 15 ಲಕ್ಷಕ್ಕೂ ಅಧಿಕ ರೈತರ ಇ-ಕೆವೈಸಿ ಆಗಿ, ರೈತ ಗುರುತಿನ ಸಂಖ್ಯೆ ಸೃಜಿಸಲಾಗಿದೆ. ಅಂದಾಜು 27 ಲಕ್ಷ ಫಲಾನುಭವಿಗಳ ಇ-ಕೆವೈಸಿ ಆಗಿ, ಕೇಂದ್ರ ರೈತ ಗುರುತಿನ ಸಂಖ್ಯೆ ಸೃಜಿಸಬೇಕಿದೆ.
ಏನು ಮಾಡಬೇಕು?: ರೈತರು ಸಮೀಪದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ, ಕಂದಾಯ ಇಲಾಖೆ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲೂ ಇ-ಕೆವೈಸಿಗೆ ಅವಕಾಶ ಕಲ್ಪಿಸಲಾಗಿದೆ. ರೈತರು ತಮ್ಮ ಆಧಾರ್ ಸಂಖ್ಯೆ, ಆಧಾರ್​ಗೆ ಜೋಡಣೆಯಾದ ಮೊಬೈಲ್ ಸಂಖ್ಯೆ ಹಾಗೂ ಹಿಡುವಳಿ ವಿವರ ನೀಡಬೇಕು. ಜತೆಗೆ ಮೊಬೈಲ್​ಗೆ ಬರುವ ಒಟಿಪಿ ಸಂಖ್ಯೆಯನ್ನು ಸಿಬ್ಬಂದಿಗೆ ನೀಡುವ ಮೂಲಕ ಇ-ಕೆವೈಸಿ ಮಾಡಿಸಬಹುದು.
"

ರಾಜ್ಯ ಸರ್ಕಾರದ ಎಲ್ಲ ಯೋಜನೆ ಸೌಲಭ್ಯ ಪಡೆಯಲು ಎಫ್​ಐಡಿ ಕಡ್ಡಾಯ ಇರುವಂತೆ ಕೇಂದ್ರ ಸರ್ಕಾರವು ತನ್ನ ಎಲ್ಲ ಯೋಜನೆಗಳಿಗೆ ಕೇಂದ್ರ ರೈತ ಗುರುತಿನ ಸಂಖ್ಯೆ ಕಡ್ಡಾಯಗೊಳಿಸಿದೆ. ಹೀಗಾಗಿ, ಫೆ. 26ರವರೆಗೆ ವಿಶೇಷ ಅಭಿಯಾನದ ರೀತಿಯಲ್ಲಿ ಎಫ್​ಐಡಿಗಳ ಇ-ಕೆವೈಸಿ ಮಾಡಲಾಗುತ್ತಿದೆ. ಇ-ಕೆವೈಸಿ ಆಗಬೇಕಾದ ರೈತರ ಪಟ್ಟಿಯನ್ನು ರೈತ ಸಂಪರ್ಕ ಕೇಂದ್ರ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. ರೈತರ ತಮ್ಮ ಹೆಸರು ಪರಿಶೀಲಿಸಿಕೊಂಡು ಇ-ಕೆವೈಸಿ ಮಾಡಿಸಬೇಕು.

| ಮಂಜುನಾಥ ಅಂತರವಳ್ಳಿ, ಜಂಟಿ ಕೃಷಿ ನಿರ್ದೇಶಕ, ಧಾರವಾಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net