ಕಳಪೆ ಈರುಳ್ಳಿ ಬಿತ್ತನೆ ಬೀಜ ವಿತರಣೆ ಆರೋಪಿಸಿ ರೈತರಿಂದ ಪ್ರತಿಭಟನೆ
Published on:
Copied
Follow Us
ಧಾರವಾಡ: ಮಹಾರಾಷ್ಟ್ರ ಮೂಲದ ಪಂಚಗಂಗಾ ಸೀಡ್ಸ್ ಕಂಪನಿಯವರು ಕಳಪೆ ಈರುಳ್ಳಿ ಬಿತ್ತನೆ ಬೀಜ ವಿತರಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ತಾಲೂಕಿನ ಕಬ್ಬೇನೂರು ಗ್ರಾಮದ ರೈತರು ಸೋಮವಾರ ನಗರದ ತೋಟಗಾರಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೀಜದ ಪ್ಯಾಕೆಟ್‌ಗಳನ್ನು ಪ್ರದರ್ಶಿಸಿ ಕಂಪನಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜೂನ್ ಮೊದಲ ವಾರದಲ್ಲಿಯೇ ಪಂಚಗಂಗಾ ತಳಿಯ ಈರುಳ್ಳಿ ಬೀಜಗಳನ್ನು ಖರೀದಿಸಿ ಬಿತ್ತನೆ ನಡೆಸಲಾಗಿತ್ತು. ಬಿತ್ತಿದ ಬೀಜಗಳಲ್ಲಿ ಶೇ. 75ರಷ್ಟು ಮೊಳಕೆಯೊಡೆದಿಲ್ಲ. ಶೇ. 25ರಷ್ಟು ಮೊಳಕೆಯೊಡೆದು ಈಗ ಬೆಳೆ ಒಣಗುತ್ತಿದೆ ಎಂದು ರೈತರು ದೂರಿದರು.
ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವೇಳೆ ಕಳಪೆ ಬೀಜ ವಿತರಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ವೇಳೆ ಎಕರೆಗೆ 15ರಿಂದ 20 ಸಾವಿರ ರೂ. ಖರ್ಚು ಮಾಡಿ ಈರುಳ್ಳಿ ಬಿತ್ತನೆ ಮಾಡಲಾಗಿತ್ತು. ಈಗ ಹಾಕಿದ ಬಂಡವಾಳವು ಬಾರದ ಸ್ಥಿತಿ ಇದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಸೀಡ್ಸ್ ಕಂಪನಿಯರು ಹಳೆಯ ಬೀಜ ವಿತರಿಸಿರುವುದರಿಂದ ಬೀಜವು ಮೊಳಕೆಯೊಡೆದಿಲ್ಲ. ವಾಪಸ್ ಬಿತ್ತನೆ ನಡೆಸಲು ಸಮಯವು ಮುಗಿದೆ. ಕೂಡಲೇ ಕಂಪನಿಯವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಬೆಳೆ ಸಮೀಕ್ಷೆ ನಡೆಸಿ ಶೀಘ್ರ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕಾಶೀನಾಥ ಭದ್ರಣ್ಣವರ, ಪಂಚಗಂಗಾ ಸೀಡ್ಸ್ ಕಂಪನಿಯವರು ಕಳಪೆ ಈರುಳ್ಳಿ ಬೀಜ ವಿತರಿಸಿದ್ದಾರೆ ಎಂದು ರೈತರು ದೂರು ಸಲ್ಲಿಸಿದ್ದಾರೆ. ತಕ್ಷಣವೇ ತೋಟಗಾರಿಗೆ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವನ್ನು ಜಮೀನುಗಳಿಗೆ ಕಳುಹಿಸಿ ಪರಿಶೀಲನೆ ನಡೆಸಿ, ವರದಿ ಆಧರಿಸಿ ರೈತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.