ಧಾರವಾಡ: ನಗರದ ಹಾವೇರಿಪೇಟೆಯ ದ್ಯಾಮವ್ವ ಹಾಗೂ ದುರ್ಗವ್ವ ದೇವಿಯರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಜಿದ್ದಾಜಿದ್ದಿನ ಟಗರಿನ ಕಾಳಗವು ಗಮನ ಸೆಳೆಯಿತು.
ಜಾತ್ರಾ ಸಂಭ್ರಮಕ್ಕೆ ಕಾಳಗವು ವಿಶೇಷ ಮೆರುಗು ನೀಡಿತು. ಕಣಕ್ಕೆ ಇಳಿದ ಟಗರುಗಳು ಅಕ್ಷರಶಃ ರಣವೀರರಂತೆ ಪರಸ್ಪರ ಮುಖಾಮುಖಿಯಾಗಿ ನೆರೆದಿದ್ದ ಸಹಸ್ರ ಕ್ರೀಡಾಭಿಮಾನಿಗಳ ಹಷೋರ್ದ್ಘಾರ, ಶಿಳ್ಳೆ, ಚಪ್ಪಾಳೆಗಳ ನಡುವೆ ರೋಚಕವಾಗಿ ನಡೆಯಿತು.
ವಿವಿಧ ಜಿಲ್ಲೆಗಳಿಂದ ಸ್ಪರ್ಧೆಗೆ ಬಂದ ಬಲಿಷ್ಠ ಟಗರುಗಳು ಪರಸ್ಪರ ಡಿಕ್ಕಿ ಹೊಡೆಯುವ ಮೂಲಕ ಶಕ್ತಿ ಪ್ರದರ್ಶನ ಮಾಡಿದವು. ಕೇವಲ ಧಾರವಾಡ ಮಾತ್ರವಲ್ಲದೆ, ಸುತ್ತ್ತಲಿನ ಹಳ್ಳಿಗಳಿಂದ ಸಾಹಸ ಕ್ರೀಡೆ ಕಣ್ತುಂಬಿಕೊಳ್ಳಲು ಸಾವಿರಾರು ಜನರು ಆಗಮಿಸಿದ್ದರು.
ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಮತ್ತು ಪ್ರೇಕ್ಷಕರಿಗೆ ತೊಂದರೆ ಆಗದಂತೆ ಮೃತ್ಯುಂಜಯನಗರದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಕಾಳಗ ಮುಗಿಯುವವರೆಗೂ ಟಗರುಗಳ ಪ್ರತಿ ಡಿಕ್ಕಿಗೂ ಪ್ರೇಕ್ಷಕರು ಎದ್ದು ನಿಂತು ಸಂಭ್ರಮಿಸಿದ್ದು ಕಂಡುಬಂತು. ವಿಜೇತ ಟಗರುಗಳ ಮಾಲೀಕರಿಗೆ ಆಕರ್ಷಕ ನಗದು ಬಹುಮಾನ, ಫಲಕ ನೀಡಿ ಗೌರವಿಸಲಾಯಿತು.