

ಹುಬ್ಬಳ್ಳಿ: ಇತ್ತೀಚಿನ ದಿನಗಳಲ್ಲಿ ಪಾರ್ಶ್ವವಾಯು ಕಾಯಿಲೆಯು ಜಾಗತಿಕವಾಗಿ ಲಕ್ಷಾಂತರ ಜನರ ಜೀವ ಹಾಗೂ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಸಮಸ್ಯೆಯಾಗಿದ್ದು, ಚಿಕಿತ್ಸೆ ಪಡೆಯುವಲ್ಲಿ ಪ್ರತಿ ನಿಮಿಷವೂ ಅತ್ಯಂತ ಮಹತ್ವದಾಗಿದೆ ಎಂದು ಧಾರವಾಡ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎನ್.ವಿ. ವಿಜಯ ಹೇಳಿದರು.
ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ನಗರದ ಬಾಲಾಜಿ ಆಸ್ಪತ್ರೆ ಮತ್ತು ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಸೊ್ಟ್ರೕಕ್ ಕುರಿತು ಜನಜಾಗೃತಿ ಮೂಡಿಸಲು ಆಸ್ಪತ್ರೆ ಆವರಣದಿಂದ ಹಮ್ಮಿಕೊಂಡಿದ್ದ ಬೃಹತ್ ವಾಕಥಾನ್ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವಕರು, ವಯಸ್ಕರು ಸೇರಿ ಎಲ್ಲ ವರ್ಗದ ಜನರಲ್ಲಿ ಕಂಡು ಬರುತ್ತಿರುವ ಪಾರ್ಶ್ವವಾಯು ಕಾಯಿಲೆಯು ಅನೇಕರ ಜೀವಕ್ಕೆ ಅಪಾಯ ತಂದೊಡ್ಡುವುದರ ಜತೆಗೆ ಕೆಲವರಲ್ಲಿ ಶಾಶ್ವತ ಅಂಗವೈಕಲ್ಯ ಸಹ ಉಂಟು ಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಾಲಾಜಿ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ ಮಾತನಾಡಿ, ಜಗತ್ತಿನಾದ್ಯಂತ ಪ್ರತಿ ನಾಲ್ಕು ಜನರ ಪೈಕಿ ಒಬ್ಬರು ತಮ್ಮ ಜೇವಿತಾವಧಿಯಲ್ಲಿ ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ 2ನೇ ಮಾರಣಾಂತಿಕ ಕಾಯಿಲೆ ಇದಾಗಿದೆ ಎಂದು ತಿಳಿಸಿದರು.
ಪಾರ್ಶ್ವವಾಯು ಉಂಟಾಗಲು ರೋಗಿಗೆ ಹಲವಾರು ಕಾರಣಗಳಿದ್ದರೂ ಅಧಿಕ ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯತೆ, ಧೂಮ ಮತ್ತು ಮದ್ಯಪಾನ ಹಾಗೂ ಅನಾರೋಗ್ಯಕರ ಜೀವನಶೈಲಿ ಪ್ರಮುಖ ಕಾರಣಗಳಾಗಿವೆ. ರೋಗ ಲಕ್ಷಣಗಳು ಕಂಡು ಬಂದ ಮೊದಲ 3 ತಾಸಿನೊಳಗೆ ಸೂಕ್ತ ಚಿಕಿತ್ಸೆ ಪಡೆದಲ್ಲಿ ಸಾವು-ನೋವು, ಅಂಗನ್ಯೂನ್ಯತೆ ಸೇರಿ ಇತರ ಸಮಸ್ಯೆಯಿಂದ ದೂರವಿರಬಹುದು ಎಂದು ಸಲಹೆ ನೀಡಿದರು.
ಜಿಲ್ಲಾ ಆರೋಗ್ಯಧಿಕಾರಿ ಡಾ. ಎಫ್.ಕೆ. ಪರಶುರಾಮ ಮಾತನಾಡಿ, ಪಾರ್ಶ್ವವಾಯುವನ್ನು ಬ್ರೖೆನ್ ಅಟ್ಯಾಕ್ ಎಂತಲೂ ಕರೆಯಲಾಗುತ್ತದೆ. ಮೆದುಳಿಗೆ ರಕ್ತ ಪೂರೈಕೆ ಸ್ಥಗಿತಗೊಂಡಾಗ, ಮೆದುಳಿನಲ್ಲಿನ ರಕ್ತನಾಳ ಒಡೆದಾಗ ಬ್ರೖೆನ್ ಅಟ್ಯಾಕ್ ಸಂಭವಿಸುತ್ತದೆ. ದುಶ್ಚಟಗಳಿಂದ ದೂರವಿದ್ದರೆ ಸಂಭವನೀಯ ಅಪಾಯದಿಂದ ದೂರವಿದ್ದಂತೆ ಎಂದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಸಂದೀಪ ಬಿಡಸಾರಿಯ ಮಾತನಾಡಿ, ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ, ಒತ್ತಡ ರಹಿತ ಜೀವನ ಶೈಲಿಯಿಂದ ಸ್ಟ್ರೋಕ್ ಅಪಾಯ ಕಡಿಮೆ ಮಾಡಿಕೊಳ್ಳಬಹುದು ಎಂದರು.
ಧಾರವಾಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ನ್ಯಾಯಾಧೀಶರಾದ ಅಲ್ಲಪ್ಪ ಎಂ. ಬಡಿಗೇರ, ದುರ್ಗಾ ಗ್ರುಪ್ ಆಫ್ ಕಂಪನೀಸ್ ಎಂಡಿ ವೀರೇಶ ಉಂಡಿ, ಡಾ. ಸೋಮಶೇಖರ ಹುದ್ದಾರ, ಸಂದೀಪ ಬೂದಿಹಾಳ, ಬಾಲಾಜಿ ಆಸ್ಪತ್ರೆ ಸಿಒಒ ಡಾ. ಬಸವಂತರಾವ ಮೋಹಿತೆ, ಎಂ.ಕೆ. ನಾಯ್ಕರ, 12ಕ್ಕೂ ಹೆಚ್ಚು ಕಾಲೇಜಿನ ವಿದ್ಯಾರ್ಥಿಗಳು, ಮುಖ್ಯಸ್ಥರು ಹಾಗೂ ಸಂಸ್ಥೆಗಳ ಪದಾಧಿಕಾರಿಗಳು, ಬಾಲಾಜಿ ಆಸ್ಪತ್ರೆ ಸಿಬ್ಬಂದಿ, ವೈದ್ಯರು ಉಪಸ್ಥಿತರಿದ್ದರು.
ಪಾರ್ಶ್ವವಾಯು ಸಮಸ್ಯೆಗೆ ಕಾರಣ ಮತ್ತು ಅದರಿಂದ ಪಾರಾಗುವ ವಿಧಾನಗಳ ಕುರಿತ ಮಾಹಿತಿಯುಳ್ಳ ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.
ಆಸ್ಪತ್ರೆ ಆವರಣದಿಂದ ಆರಂಭವಾದ ಜನಜಾಗೃತಿ ಜಾಥಾ ವಿದ್ಯಾನಗರ ಶಿರೂರು ಪಾರ್ಕ, ಆರ್ಟ್ಸ್ ಕಾಲೇಜು, ಕಿಮ್ಸ್, ಎಂ.ವಿ.ಪಿ ಎದುರಿನ ತಿಮ್ಮಸಾಗರ ರಸ್ತೆ ಮುಖಾಂತರ ಸಾಗಿ ಆಸ್ಪತ್ರೆ ಆವರಣದಲ್ಲಿ ಸಮಾಪ್ತಿಗೊಂಡಿತು.