ಹುಬ್ಬಳ್ಳಿ : ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರನ್ನು ಗೆಲ್ಲಿಸುವ ಮೂಲಕ ಇಂದಿನ ರಾಜಕಾರಣಕ್ಕೆ ತಕ್ಕ ಉತ್ತರ ನೀಡಬೇಕಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಚುನಾವಣೆ ಪ್ರಚಾರ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಆಯುಷ್ ವೈದ್ಯರ ಸಭೆಯಲ್ಲಿ ಅವರು ಮಾತನಾಡಿದರು.
ಈ ಚುನಾವಣೆ ಬ್ಯಾಲೆಟ್ ಪೇಪರ್ ಮೇಲೆ ನಡೆಯುತ್ತಿದ್ದು, ಮುಂದಿನ ಚುನಾವಣೆ ಇವಿಎಂ ಮೂಲಕ ನಡೆಯಬೇಕು. ಚುನಾವಣೆಯಲ್ಲಿ ಗೆಲುವು ಸಾಧಿಸಿದಾಗ ಇವಿಎಂ ಬಗ್ಗೆ ಚಕಾರ ಎತ್ತದ ಕಾಂಗ್ರೆಸ್, ಸೋತಾಗ ಮಾತ್ರ ಇವಿಎಂ ಮಷಿನ್, ಎಸ್ಐಆರ್ ಬಗ್ಗೆ ಚಕಾರ ಎತ್ತುತ್ತದೆ ಎಂದು ಟೀಕಿಸಿದರು.
ವಿಧಾನ ಪರಿಷತ್ ಸದಸ್ಯರಿಗೆ ಹೆಚ್ಚಿನ ಅನುದಾನ ಇರುವುದಿಲ್ಲ. ಚುನಾವಣೆ ನಡೆಯುತ್ತಿರುವ ವಿಧಾನ ಪರಿಷತ್ನ 4 ಕ್ಷೇತ್ರಗಳ ವ್ಯಾಪ್ತಿ 120 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ ಎಂದು ಹೇಳಿದರು.
ಕ್ಷಮತಾ ಸಂಸ್ಥೆಯ ಮುಖ್ಯಸ್ಥ ಗೋವಿಂದ ಜೋಶಿ ಮಾತನಾಡಿ, ರಾಜ್ಯದ ಈಗಿನ ಪರಿಸ್ಥಿತಿ ನೋಡಿದರೆ ಸಂಭಾವಿತರು ಹಾಗೂ ಒಳ್ಳೆಯವರು ರಾಜಕಾರಣದಲ್ಲಿ ಇರುವ ಅಗತ್ಯವಿದೆ. ಎಸ್.ವಿ. ಸಂಕನೂರ ಅವರು ಪ್ರಾಮಾಣಿಕ, ಸಜ್ಜನ ರಾಜಕಾರಣಿಯಾಗಿದ್ದು, ಅವರನ್ನು ಚುನಾಯಿಸುವ ಅಗತ್ಯ ಇದೆ ಎಂದರು.
ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ ಮಾತನಾಡಿ, ಪ್ರಜ್ಞಾವಂತ ಮತದಾರರಿಂದ ಪ್ರಜ್ಞಾವಂತರನ್ನು ಆಯ್ಕೆ ಮಾಡುವ ಚುನಾವಣೆೆ ಇದು. ವಿಧಾನ ಪರಿಷತ್ಗೆ ತನ್ನದೇ ಆದ ಘನತೆ ಇದ್ದು, ಯೋಗ್ಯರನ್ನು ಚುನಾಯಿಸಬೇಕು. ಪ್ರಾದೇಶಿಕ ಅಸಮತೋಲನ, ಹುಬ್ಬಳ್ಳಿ-ಧಾರವಾಡದ ಅಭಿವೃದ್ಧಿ, ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರ ಕೊರತೆ, ಶಿಕ್ಷಣ ಸಂಸ್ಥೆಗಳ ಸಮಸ್ಯೆ ಸೇರಿ ಹಲವಾರು ಸಮಸ್ಯೆಗಳ ಬಗ್ಗೆ ಎಸ್.ವಿ. ಸಂಕನೂರ ಅವರು ದಾಖಲೆ ಸಮೇತ ಸದನದಲ್ಲಿ ಧ್ವನಿ ಎತ್ತಿದ್ದಾರೆ ಎಂದರು.
ಉದ್ಯಮಿ ಶಂಕ್ರಣ್ಣ ಮುನವಳ್ಳಿ ಮಾತನಾಡಿ, ಕಳೆದ ಎರಡು ಅವಧಿಯಲ್ಲಿ ಎಸ್.ವಿ. ಸಂಕನೂರ ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸುವ ವಿಧಾನ ವಿವರಿಸಿದರು.
ಡಾ. ರವೀಂದ್ರ ಯಲಿಕಾನ, ಡಾ. ಸೋಮಶೇಖರ ಹುದ್ದಾರ ಸೇರಿದಂತೆ ಹೆಗ್ಗೇರಿ ಆಯುರ್ವೆದ ಆಸ್ಪತ್ರೆ, ಸಂಜೀವಿನಿ ಆಯುರ್ವೆದ ಆಸ್ಪತ್ರೆ, ವರೂರಿನ ಎಜಿಎಂ ಆಯುರ್ವೆದ ಆಸ್ಪತ್ರೆಗಳ ವೈದ್ಯರು ಉಪಸ್ಥಿತರಿದ್ದರು.