14 ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯತ್ಯಯ

DC Snehal R
DC Snehal R
Published on
ಧಾರವಾಡ: ಬೇಸಿಗೆ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ 14 ಗ್ರಾಮಗಳಲ್ಲಿ ಕುಡಿಯುವ ನೀರಿನ ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಯಿಂದ ಸ್ಥಳೀಯವಾಗಿ ಲಭ್ಯವಿರುವ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಕುಡಿಯುವ ನೀರು ಅಭಾವವಾಗದಂತೆ ಮುಂಜಾಗ್ರತವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಿವಿಧ ತಾಲೂಕುಗಳ 90 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳೆಂದು ಪಟ್ಟಿ ಮಾಡಿದೆ. ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ತಕ್ಷಣ ಪರಿಹರಿಸುವುದಕ್ಕೆ ಆಯಾ ಗ್ರಾಮ ವ್ಯಾಪ್ತಿಯ ಅಂದಾಜು 186 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ನೀರಿನ ಅಭಾವ ಕಂಡುಬಂದಲ್ಲಿ ತಕ್ಷಣ ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಧಾರವಾಡ ತಾಲೂಕಿನಲ್ಲಿ ಒಟ್ಟು 115 ಗ್ರಾಮಗಳ ಪೈಕಿ 30 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಪಟ್ಟಿ ಮಾಡಲಾಗಿದೆ. 60 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ, ಒಪ್ಪಂದ ಮಾಡಿಕೊಳ್ಳಲಾಗಿದೆ. ಧಾರವಾಡ ತಾಲೂಕಿನ ಹೊಸಟ್ಟಿ, ಮಂಡಿಹಾಳ, ಬೇಲೂರ, ಮುಗದ, ಮನಗುಂಡಿ, ಶಿಬಾರಗಟ್ಟಿ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ. ಹುಬ್ಬಳ್ಳಿ ತಾಲೂಕಿನಲ್ಲಿ ಒಟ್ಟು 46 ಗ್ರಾಮಗಳ ಪೈಕಿ 19 ಗ್ರಾಮಗಳನ್ನು ನೀರಿನ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿದ್ದು, ಆ ಗ್ರಾಮಗಳಲ್ಲಿ 30 ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಹುಬ್ಬಳ್ಳಿ ತಾಲೂಕಿನ ನೂಲ್ವಿ, ಅದರಗುಂಚಿ, ಕುರಡಿಕೆರೆ ಗ್ರಾಮಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
ಕಲಘಟಗಿ ತಾಲೂಕಿನಲ್ಲಿ ಒಟ್ಟು 87 ಗ್ರಾಮಗಳಲ್ಲಿ 16 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳೆಂದು ಪಟ್ಟಿ ಮಾಡಲಾಗಿದೆ. 46 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಕಲಘಟಗಿ ತಾಲೂಕಿನ ನೆಲ್ಲಿಹರವಿ ತಾಂಡ, ಬಿ.ಹುಲಿಕಟ್ಟಿ, ದ್ಯಾಮನಕೊಂಡ, ಮುಕ್ಕಲ, ಹಿರೆ ಹುಣಸಿಕಟ್ಟಿ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಧಾರವಾಡ ಜಿಲ್ಲೆಯಲ್ಲಿ ಪ್ರಸ್ತುತ 14 ಗ್ರಾಮಗಳಲ್ಲಿ 16 ಖಾಸಗಿ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ ಕುಂದಗೋಳ ತಾಲೂಕಿನ 9 ಗ್ರಾಮಗಳಿಗೆ 48 ಖಾಸಗಿ ಕೊಳವೆಬಾವಿಗಳು, ಅಳ್ನಾವರ ತಾಲೂಕಿನ 4 ಗ್ರಾಮಗಳಿಗೆ 2 ಖಾಸಗಿ ಕೊಳವೆಬಾವಿಗಳನ್ನು ಮುಂಜಾಗ್ರತಿಯಾಗಿ ಗುರುತಿಸಲಾಗಿದೆ. ನವಲಗುಂದ, ಅಣ್ಣಿಗೇರಿ ಮತ್ತು ಹುಬ್ಬಳ್ಳಿ ನಗರ ತಾಲೂಕಿನಲ್ಲಿ ಕೆರೆ ಹಾಗೂ ಇತರ ಜಲಮೂಲಗಳ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net