drama camp ಮಕ್ಕಳಲ್ಲಿ ಕಲಾಭಿರುಚಿ ಬೆಳೆಸಿದ ಶಿಬಿರ

drama camp ಹುಬ್ಬಳ್ಳಿ ತಾಲೂಕಿನ ಕಿರೇಸೂರ ಅರಳೀಕಟ್ಟೆ ತೆರೆದ ವಾಚನಾಲಯದಲ್ಲಿ ಏರ್ಪಡಿಸಿದ್ದ ನೃತ್ಯ, ನಾಟಕ ಶಿಬಿರದಲ್ಲಿ ಪಾಲ್ಗೊಂಡ ಕಲಾವಿದರು, ಮಕ್ಕಳು.
drama camp ಹುಬ್ಬಳ್ಳಿ ತಾಲೂಕಿನ ಕಿರೇಸೂರ ಅರಳೀಕಟ್ಟೆ ತೆರೆದ ವಾಚನಾಲಯದಲ್ಲಿ ಏರ್ಪಡಿಸಿದ್ದ ನೃತ್ಯ, ನಾಟಕ ಶಿಬಿರದಲ್ಲಿ ಪಾಲ್ಗೊಂಡ ಕಲಾವಿದರು, ಮಕ್ಕಳು.
Published on

ಪ್ರಮುಖ ಮುಖ್ಯಾಂಶಗಳು

  • ಕಿರೇಸೂರ ಅರಳೀಕಟ್ಟೆ ತೆರೆದ ವಾಚನಾಲಯದಲ್ಲಿ ಆಯೋಜನೆ
  • ಅಂಕ ಗಳಿಕೆಗಾಗಿ ಶಿಕ್ಷಣ ಆಗಬಾರದು
ತಾಲೂಕಿನ ಕಿರೇಸೂರ ಸರ್ಕಾರಿ ಪ್ರೌಢಶಾಲೆ ಆವರಣದ ಅರಳೀಕಟ್ಟೆ ತೆರೆದ ವಾಚನಾಲಯದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಸಂಗೀತ, ನೃತ್ಯ, ನಾಟಕ ಶಿಬಿರ ವಿದ್ಯಾರ್ಥಿಗಳಲ್ಲಿ ಕಲಾಭಿರುಚಿ ಬೆಳೆಸುವಲ್ಲಿ ಯಶಸ್ವಿಯಾಯಿತು.
ಖ್ಯಾತ ಜಾನಪದ ಕಲಾವಿದ ಹರ್ಲಾಪುರದ ಶಂಭಯ್ಯ ಹಿರೇಮಠ ಅವರು ತಮಟೆ ಬಡಿದು ಶಿಬಿರಕ್ಕೆ ಚಾಲನೆ ನೀಡಿದರು. ಅಂಕ ಗಳಿಕೆಗಾಗಿ ಶಿಕ್ಷಣ ಆಗಬಾರದು, ಅದು ಬದುಕು ನಿರ್ಮಿಸಿ ಕೊಡಬೇಕು ಎಂದು ಅವರು ಪ್ರತಿಪಾದಿಸಿದರು.
ರಂಗಭೂಮಿಯ ರಾಜಕುಮಾರ ಖ್ಯಾತಿಯ ಕಲಘಟಗಿಯ ಬಸವರಾಜ ದೊಡ್ಡಮನಿ ಅವರು, ಕರ್ನಾಟಕ ರತ್ನ ಡಾ. ರಾಜಕುಮಾರ ಅವರ ಅಭಿನಯ ಮಾಡಿ ತೋರಿಸಿದರು. ಮನುಷ್ಯತ್ವವನ್ನು ಕಲಿಸುವ ನಾಟಕ, ನೃತ್ಯ, ಸಂಗೀತ ಮನುಷ್ಯನ ಸಹಜ ಆಸಕ್ತಿಗಳು. ಶಾಲಾ ಪಠ್ಯ ಇವುಗಳಿಗೆ ಇಂಬು ನೀಡಬೇಕು ಎಂದು ಅಭಿಪ್ರಾಯಪಟ್ಟರು.
ನಾಟಕ ನಿರ್ದೇಶಕ ಬಸವರಾಜ ಗುಡ್ಡಪ್ಪನವರ ಅವರು ಶಿಕ್ಷಕ ಸಾಹಿತಿ ಡಾ. ಲಿಂಗರಾಜ ರಾಮಾಪುರ ಅವರು ಬರೆದ "ಮಣ್ಣು ಜೀವಿಸಲಿ' ಎಂಬ ನಾಟಕದ ತಾಲೀಮು ಮಾಡಿಸಿದರು. ಮಕ್ಕಳಿಗೆ ಪಾತ್ರಗಳನ್ನು ಹಂಚಿ ಅಭಿನಯ ಮಾಡಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಸಂಗೀತ ಶಿಕ್ಷಕ ಮಂಜುನಾಥ ಮಂಗೂಣಿ, ವಚನ, ಜಾನಪದ ಗೀತೆ, ಭಾವಗೀತೆಗಳನ್ನು ಕಲಿಸಿಕೊಟ್ಟರು. ಹನುಮಂತಪ್ಪ ಪೆಂಟಿ ಹಾಮೋರ್ನಿಯಂ ಸಾಥ್​ ನೀಡಿದರು.
ಕೊಪ್ಪಳದ ಸ್ಪೂರ್ತಿ ಕಾಮತ, ಬೀದರಿನ ಸೌಮ್ಯ, ಬಾಗಲಕೋಟೆಯ ಶರಣ ತಳವಾರ ವಿದ್ಯಾರ್ಥಿಗಳಿಗೆ ಸರಳವಾದ ನೃತ್ಯಗಳನ್ನು ಕಲಿಸಿಕೊಟ್ಟರು.
ಮೂರು ದಿನ ನಡೆದ ಸಂಗೀತ. ನೃತ್ಯ, ನಾಟಕ ಶಿಬಿರ ಮಕ್ಕಳಿಗೆ ಪಠ್ಯಪುಸ್ತಕ, ಪರೀಕ್ಷೆ, ಗೃಹಕಾರ್ಯ ಮುಂತಾದ ಒತ್ತಡಗಳಿಂದ ದೂರ ಮಾಡಿ ಸಂತಸದಾಯಕ ಕಲಿಕೆಯ ವಾತಾವರಣವನ್ನು ಸೃಷ್ಟಿಸಿತು.
ಸ್ಥಳಿಯ ರಂಗಕಲಾವಿದರಾದ ರಾಮಣ್ಣ ಹುಗ್ಗೆಣ್ಣವರ, ಗುರುಶಾಂತಯ್ಯ ಪ್ರಭುಸ್ವಾಮಿಮಠ, ಮಂಜುನಾಥ ಹುಬ್ಬಳ್ಳಿ, ಪ್ರವಿಣ ಚಿಕ್ಕರಡ್ಡಿ, ಸಂಜೀವ ತಿರ್ಲಾಪುರ ಮೊದಲಾದವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net