ನಟ ಚೇತನ ಅವರನ್ನು ರಾಜ್ಯದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಡಾ. ರಾಜಕುಮಾರ (dr.rajkumar) ಅಭಿಮಾನಿ ಸಂಘಗಳ ಒಕ್ಕೂಟದಿಂದ ಹುಬ್ಬಳ್ಳಿಯಲ್ಲಿ ಸೋಮವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ರವಾನಿಸಲಾಯಿತು.
ಹುಬ್ಬಳ್ಳಿ: ಡಾ. ರಾಜಕುಮಾರ ಸ್ಮಾರಕಕ್ಕೆ ರಾಜ್ಯ ಸರ್ಕಾರ ಎರಡೂವರೆ ಎಕರೆ ಭೂಮಿ ಕೊಟ್ಟಿದ್ದನ್ನು ಪ್ರಶ್ನಿಸಿರುವ ನಟ ಚೇತನ ಅವರನ್ನು ರಾಜ್ಯದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಡಾ. ರಾಜಕುಮಾರ (dr.rajkumar) ಅಭಿಮಾನಿ ಸಂಘಗಳ ಒಕ್ಕೂಟದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ನಟ ಚೇತನ ಉನ್ನತ ಪದವಿ ಕಲಿತರೂ ತಲೆಯಲ್ಲಿ ಬುದ್ಧಿ ಇಲ್ಲ. ಕರ್ನಾಟಕ ಕೀರ್ತಿ ಹಾಗೂ ಕನ್ನಡದ ಕಂಪನನ್ನು ದೇಶ-ವಿದೇಶಗಳಲ್ಲಿ ಪಸರಿಸಿದ್ದರು ಡಾ. ರಾಜಕುಮಾರ. ತಮ್ಮ ಅಭಿನಯದ ಮೂಲಕ ಇಡೀ ಪ್ರಪಂಚವನ್ನೇ ಮೆಚ್ಚುವ ಕೆಲಸ ಮಾಡಿದರು. ಕನ್ನಡ ಭಾಷೆಯನ್ನು ಬಿಟ್ಟು ಇತರ ಭಾಷೆಯಲ್ಲಿ ನಟಿಸದೇ ಕನ್ನಡದ ಸಾರ್ವಭೌಮತೆಯನ್ನು ಎತ್ತಿಹಿಡಿದರು.
ಸಾಹಿತಿ ಚಂದ್ರಶೇಖರ ಪಾಟೀಲ, ನಾಡೋಜ ಪಾಟೀಲ ಪುಟ್ಟಪ್ಪ ಹಾಗೂ ಸಾ.ರಾ. ಗೋವಿಂದ ಅವರು ಗೋಕಾಕ ಚಳವಳಿಯ ಕಿಚ್ಚು ಹಚ್ಚಿದ್ದರು. ಇಂಥ ಸಂದರ್ಭದಲ್ಲಿ ಡಾ. ರಾಜಕುಮಾರ ಅವರು ಗೋಕಾಕ ಚಳವಳಿಯಲ್ಲಿ ಭಾಗವಹಿಸಿ ಕನ್ನಡ ಭಾಷಾಭಿಮಾನವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋದರು.
ಡಾ. ರಾಜಕುಮಾರ.ಇಂಥ ನಟಸೌರ್ವಭೌಮರಿಗೆ ಅವಮಾನ ಮಾಡುವ ಮೂಲಕ ಚೇತನ ಅತ್ಯಂತ ಹೇಯವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ, ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಚೇತನ ಭಾವಚಿತ್ರಕ್ಕೆ ಚಪ್ಪಲಿ ಹಾಕಿ ಆಕ್ರೋಶ ವ್ಯಕ್ತಪಡಿಸಲಾಯಿತು. ನಂತರ ಚೇತನ ಪ್ರತಿಕೃತಿ ದಹಿಸಲಾಯಿತು.
ಚೇತನ ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದ ಮನವಿಯನ್ನು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ರವಾನಿಸಲಾಯಿತು. ಚೇತನ ವಿರುದ್ಧ ಕ್ರಮ ಜರುಗಿಸುವಂತೆ ಉಪನಗರ ಠಾಣೆಗೆ ದೂರು ನೀಡಲಾಯಿತು.
ಒಕ್ಕೂಟದ ಉಪಾಧ್ಯಕ್ಷ ಶಿವಾನಂದ ಮುತ್ತಣ್ಣವರ, ಪ್ರಮುಖರಾದ ಚಿದಾನಂದ ಸವದತ್ತಿ, ದ್ಯಾಮಣ್ಣ ಡೋಂಗಿ, ಪುಂಡಲೀಕ ಬಡಿಗೇರ, ಬಡೇಖಾನ್, ಆನಂದ ಡೋಂಗಿ, ಪೀಟರ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.