ಉಡುಪಿ ಶ್ರೀಕೃಷ್ಣ ಮಠದ ಆವರಣದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರ ನಿಂದನೆ ಖಂಡಿಸಿ ಆಯೋಜಿಸಿದ್ದ ಈ ಏಕತಾ ಸಭೆಯಲ್ಲಿ ಭಾಗವಹಿಸಿದ್ದ ಬ್ರಾಹ್ಮಣ ಸಮಾಜದ ಪ್ರಮುಖರು, ಎಲ್ಲರೂ ಒಗ್ಗಟ್ಟಾಗಿ ಬ್ರಾಹ್ಮಣ ಸಮಾಜವನ್ನು ಸಶಕ್ತಗೊಳಿಸೋಣ ಎಂಬ ನಿರ್ಧಾರ ಕೈಗೊಂಡರು.
ಮೊದಲು ನಾವೆಲ್ಲ ಭಾರತೀಯರು, ಹಿಂದುಗಳು. ಬ್ರಾಹ್ಮಣ ಸಮಾಜದವ ಒಳ ಪಂಗಡಗಳನ್ನು ಮನೆಗಳಲ್ಲಿ ಮಾತ್ರ ಆಚರಿಸೋಣ. ಹೊರಗಡೆ ಬಂದಾಗ ಒಳ ಪಂಗಡಗಳನ್ನೆಲ್ಲ ಮರೆತು, ಒಗ್ಗಟ್ಟಾಗಿರೋಣ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೇದಮೂರ್ತಿ ಪಂ. ಸಮೀರಾಚಾರ್ಯ ಕಂಠಪಲ್ಲಿ, ಗುರು ನಿಂದನೆ, ಆಚಾರ್ಯರ ನಿಂದನೆ ಸರಿ ಅಲ್ಲ. ವೈಷ್ಣವರು ಹಾಗೂ ಸ್ಮಾರ್ಥರು ಜೊತೆಯಾಗಿ ಇರಬೇಕು.
ಇವರು ಜೊತೆಯಾಗಿದ್ದರೆ ಹಾಲು, ಜೇನಿನಂತೆ ಇರುತ್ತದೆ. ಇದರೊಂದಿಗೆ ರಾಮಾನುಜಾಚಾರ್ಯರ ಸಂಪ್ರದಾಯ ಸೇರಿದರೆ ಏಲಕ್ಕಿಯೂ ಸೇರಿದಂತೆ ಆಗುತ್ತದೆ ಎಂದರು.
ಯಾವುದೇ ಸಂದರ್ಭದಲ್ಲಿ ಆಚಾರ್ಯರನ್ನು, ಯತಿಗಳನ್ನು, ಸಾಧು-ಸಂತರನ್ನು ಯಾರೊಬ್ಬರೂ ನಿಂದಿಸುವುದಿಲ್ಲ ಎಂಬ ಪ್ರತಿಜ್ಞೆಯನ್ನು ಇದೇ ಸಂದರ್ಭದಲ್ಲಿ ಸಮಾಜದವರಿಂದ ಮಾಡಿಸಿದರು.
ಉದ್ಯಮಿ ಹಾಗೂ ಸಮಾಜದ ಮುಖಂಡರಾದ ಗೋವಿಂದ ಜೋಶಿ ಮಾತನಾಡಿ, ಬ್ರಾಹ್ಮಣ ಸಮಾಜ ಸಣ್ಣದು. ನಾವು ಯಾರೊಬ್ಬರ ಉಸಾಬರಿಗೆ ಹೋಗದಿದ್ದರೂ, ಇಡೀ ಸಮಾಜಕ್ಕೆ ಮಾರ್ಗದರ್ಶನ ಮಾಡುವ ಛಾಪು ನಮಗೆ ಇದೆ ಎಂದರು.
ಮಾಜಿ ಮೇಯರ್ ಹಣಮಂತ ಡಂಬಳ ಮಾತನಾಡಿ, ಬ್ರಾಹ್ಮಣ ಸಮಾಜವನ್ನು ಹೀಗಳಿಯುವುದು ಶೋಕಿಯಾಗಿದೆ. ಬ್ರಾಹ್ಮಣರನ್ನು ಹಗುರವಾಗಿ ಪರಿಗಣಿಸುವುದು ಹೆಚ್ಚುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜದ ಮತ್ತೊಬ್ಬ ಪ್ರಮುಖರಾದ ಸುಧೀರ ದೇಶಪಾಂಡೆ ಮಾತನಾಡಿ, ಉಡುಪಿಯಲ್ಲಿ ನಿಂದನೆ ಮಾಡಿದವರು ಸೇರಿದಂತೆ ಯಾರೇ ಆಚಾರ್ಯರನ್ನು ನಿಂದನೆ ಮಾಡಿದರೂ ಕಾನೂನು ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಹಾಗೂ ಧಾರವಾಡ ಜಿಲ್ಲಾ ಪ್ರತಿನಿಧಿ ಲಕ್ಷ ಣ ಕುಲಕರ್ಣಿ, ಭಾರತೀಯ ಸಂಸ್ಕೃತಿ ಹಾಗೂ ಧರ್ವಚರಣೆಯಿಂದಾಗಿ ಇಡೀ ಭಾರತ ಶ್ರದ್ಧಾ ಕೇಂದ್ರವಾಗಿದೆ. ಆದರೆ, ಕೆಲವರು ವೈಚಾರಿಕ ಭಿನ್ನಾಭಿಪ್ರಾಯ ಮೂಡಿಸುವ ಕುತಂತ್ರ ನಡೆಸಿದ್ದಾರೆ ಎಂದು ದೂರಿದರು.
ಯಾವುದೇ ಆಚಾರ್ಯರ ನಿಂದನೆಯನ್ನು ಬ್ರಾಹ್ಮಣ ಸಮಾಜ ಸಹಿಸುವುದಿಲ್ಲ. ಸಮಾಜದ ಬಡ ಮಕ್ಕಳಿಗೆ ಶಿಕ್ಷಣ ಒದಗಿಸಬೇಕಿದೆ. ಉತ್ತಮ ಆರೋಗ್ಯ ನೀಡಬೇಕಿದೆ. ಈ ನಿಟ್ಟಿನಲ್ಲಿ ಚಿಂತಿಸುವ ಅಗತ್ಯ ಇದೆ ಎಂದರು.
ಮಹಾಸಭಾದ ರಾಜ್ಯ ಸಹ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಸಮಾಜದ ಪ್ರಮುಖರಾದ ಸಂಜೀವ ಜೋಶಿ, ಅರವಿಂದ ಕುರ್ತಕೋಟಿ, ರವಿ ದೇಶಪಾಂಡೆ, ಉಮೇಶ ದುಸಿ, ನರಸಿಂಹರಾವ ಸೋಮಲಾಪುರ, ಸುನೀಲ ಗುಮಾಸ್ತೆ, ಎನ್.ಆರ್. ಕುಲಕರ್ಣಿ, ಜೋಯಿಸ್ ಹುಲಿರಾಜಾಚಾರ್ಯ, ಉಷಾ ಡಬೀರ, ಮನೋಹರ ಪರ್ವತಿ ಹಾಗೂ ಇತರರಿದ್ದರು.