ಉದ್ಯೋಗ ಖಾತ್ರಿ ಯೋಜನೆಯಡಿ ಸಮುದಾಯ ಕಾಮಗಾರಿಗಳನ್ನು ಕೈಗೊಂಡ ಸಂದರ್ಭದಲ್ಲಿ ನಕಲಿ ಕಾರ್ಮಿಕರ ಹಾಜರಾತಿ ಹಾಕುವುದು, ಪುರುಷರಿಗೆ ಸೀರೆ ಉಡಿಸಿ, ಮಹಿಳಾ ಕೂಲಿಕಾರರ ಹಾಜರಾತಿ ತೋರಿಸಿ ವೇತನ ಪಾವತಿ ಪ್ರಕರಣಗಳು ಬಾಗಲಕೋಟೆ, ಯಾದಗಿರಿಯಲ್ಲಿ ಬೆಳಕಿಗೆ ಬಂದಿದ್ದವು. ಈ ರೀತಿಯಲ್ಲಿ ಯೋಜನೆ ಹಣ ದುರ್ಬಳಕೆ ಹಾಗೂ ನಕಲಿ ಕಾರ್ಮಿಕರ ಹಾಜರಾತಿ ತಡೆಯುವ ನಿಟ್ಟಿನಲ್ಲಿ ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಂ (ಎನ್‌ಎಂಎಂಎಸ್)ಅಡಿ ಇ-ಕೆವೈಸಿ ವ್ಯವಸ್ಥೆ ರೂಪಿಸಲಾಗಿದೆ. ಈಗಾಗಲೇ ಉದ್ಯೋಗ ಚೀಟಿಗಳಿಗೆ ಕೂಲಿಕಾರರ ಆಧಾರ ದತ್ತಾಂಶ ಜೋಡಿಸಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎನ್‌ಎಂಎಂಎಸ್ ಆ್ಯಪ್ ಮೂಲಕ ಕೂಲಿಕಾರರ ಮುಖ ಚಹರೆ ತಾಳೆ ಮಾಡಲಾಗುತ್ತಿದೆ. ಗ್ರಾಪಂ ಹಾಗೂ ನರೇಗಾ ಸಿಬ್ಬಂದಿ ತಮ್ಮ ಮೊಬೈಲ್‌ನಲ್ಲಿ ಎನ್‌ಎಂಎಂಎಸ್ ಆ್ಯಪ್ ಹಾಕಿಕೊಂಡು ಕೂಲಿಕಾರರ ಚೀಟಿ ಸಂಖ್ಯೆ, ಆಧಾರ್ ಸಂಖ್ಯೆ ದಾಖಲಿಸಿ, ಅವರ ಮುಖ ಚಹರೆ ಸೆರೆ ಹಿಡಿದು ಇ-ಕೆವೈಸಿ ಮಾಡುತ್ತಿದ್ದಾರೆ.