ಶ್ರೀ ಮಹಾದೇವ ತಾತನವರ ಪುಣ್ಯಾರಾಧನೆ ಫೆ. 7ರಿಂದ mahadev

ಶ್ರೀ ಅಲ್ಲೀಪುರ ಮಹಾದೇವ ತಾತನವರು.
ಶ್ರೀ ಅಲ್ಲೀಪುರ ಮಹಾದೇವ ತಾತನವರು.
Published on

ಪ್ರಮುಖ ಮುಖ್ಯಾಂಶಗಳು

  • ಧಾರವಾಡದಲ್ಲಿ 38ನೇ ವರ್ಷದ ಆರಾಧನೆ ಆಚರಣೆ
ಧಾರವಾಡ: ರಾಜೀವಗಾಂಧಿ ನಗರದಲ್ಲಿರುವ ಶ್ರೀ ಅಲ್ಲೀಪುರ ಮಹಾದೇವ ತಾತನವರ ಮಠದಲ್ಲಿ ಫೆ. 7 ಹಾಗೂ 8ರಂದು ಶ್ರೀ ಮಹಾದೇವ ತಾತನವರ 38ನೇ ವರ್ಷದ ಪುಣ್ಯಾರಾಧನೆ ಏರ್ಪಾಟಾಗಿದೆ. 7 ರಂದು ಬೆಳಗ್ಗೆ 7.10ಕ್ಕೆ ಷಟ್‌ಸ್ಥಳ ಧ್ವಜಾರೋಹಣ. 10ಕ್ಕೆ ತಾತನವರ ವಸಂತೋತ್ಸವ ಹಾಗೂ ತೆಪ್ಪೋತ್ಸವ. ಸಂಜೆ 6ಕ್ಕೆ ದೀಪಾಲಂಕಾರ, ಗಾನ ಸುಧಾ ಕಾರ್ಯಕ್ರಮ. ಶೀತಲ ಜೋಶಿ ಮತ್ತು ಸಂಗಡಿಗರು, ಪ್ರಣಮ್ಯದೇವಿ ಹಿರೇಮಠ, ಮಾನ್ಯತಾ ಕೋಟಿಮಠ ಅವರಿಂದ ಭರತನಾಟ್ಯ ಸೇವೆ, ಸುರೇಶ ಗಾಡಿ ಅಧ್ಯಕ್ಷತೆ ವಹಿಸುವರು. ಡಾ. ವೀಣಾ ಬಿರಾದಾರ ಅತಿಥಿಗಳಾಗಿ ಭಾಗವಹಿಸುವರು. 8ರಂದು ಬೆಳಗ್ಗೆ 5ಕ್ಕೆ ತಾತನವರ ಗದ್ದುಗೆಗೆ ರುದ್ರಾಭಿಷೇಕ. 5.30ಕ್ಕೆ ಅಗ್ರೋದಕ ತರುವುದು. 7ಕ್ಕೆ ಅಗ್ನಿಕುಂಡ ಕಾರ್ಯಕ್ರಮ. 9ಕ್ಕೆ ತಾತನವರ ಪಲ್ಲಕ್ಕಿ ಉತ್ಸವ, 10.30ಕ್ಕೆ ಆರಾಧನಾ ಮಹೋತ್ಸವ. 11ಕ್ಕೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿದ್ದು, ನಂತರ ಮಹಾಪ್ರಸಾದ ವ್ಯವಸ್ಥೆ ಇದೆ. ನರಗುಂದ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರುದ್ರೇಶ ಹರಕುಣಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಹುಬ್ಬಳ್ಳಿ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಪಾಲ್ಗೊಳ್ಳವರು ಎಂದು ಶ್ರೀ ಮಹಾದೇವ ತಾತನವರ ಸದ್ಭಕ್ತ ಮಂಡಳಿ ತಿಳಿಸಿದೆ.
ಮಹಾದೇವ ತಾತನವರ ಹಿನ್ನೆಲೆ:  
ಮೈಸೂರಿನ ಮರಯ್ಯಸ್ವಾಮಿ-ಮಹದೇವಮ್ಮನವರ ಉದರದಲ್ಲಿ ಪುಣ್ಯದಂತೆ ಹುಟ್ಟಿ ಬಂದರು. ಜ್ಞಾನದಂತೆ ಇದ್ದರು. ಭಕ್ತೋದ್ಧಾರಕ್ಕಾಗಿಯೇ ಜೀವನ ಮುಡಿಪಾಗಿಟ್ಟಿದ್ದ ತಾತನವರು ಅನೇಕ ಲೀಲಾ ಪವಾಡಗಳನ್ನು ಮಾಡಿ ಭಕ್ತರ ಒಳಿತಿಗೆ ಶ್ರಮಿಸಿದರು. ತ್ರಿಕಾಲ ಜ್ಞಾನಿಗಳಾಗಿದ್ದ ತಾತನವರು ಬಳ್ಳಾರಿ, ಧಾರವಾಡ, ಮೈಸೂರು ಸೇರಿ ವಿವಿಧೆಡೆ ಒಟ್ಟು 9 ಮಠಗಳನ್ನು ಸ್ಥಾಪಿಸಿದ್ದಾರೆ. ಅಲ್ಲೀಪುರ ತಾತನವರು ಮಹಾಯೋಗದ ಬಲದಿಂದ 391 ವರುಷ ಬಾಳಿದ ಪುಣ್ಯಾತ್ಮರು. ಮೈಸೂರು ಮಹಾರಾಜರ ಗುರುಗಳಾಗಿದ್ದ ಇವರು ಶಿವಯೋಗಿ ಸಾಮ್ರಾಟರು. ಮಹಾಮಹಿಮರ ಜೀವನ ಚರಿತ್ರೆ ಸಾರಿ ಹೇಳುವ ಐತಿಹಾಸಿಕ ಸತ್ಯಸಂಗತಿಗಳು ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಇಂದಿಗೂ ಇವೆ. 
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಸಮೀಪವಿರುವ ಕಪಿಲಾ, ಭೃಗು ನದಿಗಳ ದಡದ ಸಂಗಮ ಕ್ಷೇತ್ರದಲ್ಲಿ ಸ್ಥಾಪಿಸಿದ ಮಠದಲ್ಲಿ ತಾತನವರು 1987ರ ಡಿ. 30ರ ವೈಕುಂಠ ಏಕಾದಶಿಯಂದು ಶಿವಯೋಗಿ ಸಾಮ್ರಾಟರು ಶಿವಯೋಗದಲ್ಲಿಯೇ ಸಮಾಧಿ ಹೊಂದಿದರು. ಇಂಥ ಮಹಾತ್ಮರನ್ನು ನೆನೆಯುವುದೇ ಮಹಾಮುಕ್ತಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net