ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಡ. ಇದರ ಬದಲಾಗಿ ಬೃಹತ್ ಹುಬ್ಬಳ್ಳಿ-ಧಾರವಾಡ (ಮೆಟ್ರೋಪೊಲಿಟನ್ ಸಿಟಿ) ಘೋಷಣೆ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಡಗಗಳ ಮತ್ತು ನೌಕರರ ಸಂಘದಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಮಹಾರಾಷ್ಟ್ರದಲ್ಲಿ 10 ಮೆಟ್ರೋಪೋಲಿಟನ್ ಸಿಟಿ, ಕೇರಳ, ತಮಿಳುನಾಡು ಹಾಗೂ ಗುಜರಾತ ರಾಜ್ಯಗಳಲ್ಲಿ ಬೃಹತ್ ವಾಣಿಜ್ಯ ನಗರಗಳು ಬೃಹದಾಕಾರದಲ್ಲಿ ಬೆಳೆದು ನಿಂತಿವೆ. ಅದೇ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ಮೆಟ್ರೋಪೋಲಿಟನ್ ಸಿಟಿಯಾದರೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಲಿದೆ. 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನು ಬೃಹತ್ ಹು-ಧಾ ಮೆಟ್ರೋಪೊಲಿಟನ್ ಸಿಟಿ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಧಾರವಾಡದ ಜನಸಂಖ್ಯೆ ಪ್ರಸ್ತುತ 2.80 ಲಕ್ಷ ಇದೆ. ಸರ್ಕಾರದ ಆದೇಶದಂತೆ 700 ಜನರಿಗೆ ಒಬ್ಬ ಪೌರ ಕಾರ್ಮಿಕರನ್ನು ನೇಮಿಸಬೇಕು. ಧಾರವಾಡದಲ್ಲಿಯಷ್ಟೇ 700 ಪೌರ ಕಾರ್ಮಿಕರಿದ್ದಾರೆ. ಅದರಂತೆ ಪ್ರತ್ಯೇಕ ಪಾಲಿಕೆಯಾದರೆ 200 ಪೌರ ಕಾರ್ಮಿಕರು ತಮ್ಮ ಕೆಲಸವನ್ನು ಕಳೆದುಕೊಳ್ಳುತ್ತಾರೆ. ಅವರ ಕುಟುಂಬಗಳು ಬೀದಿ ಪಾಲಾಗುತ್ತಾರೆ. ಪೌರ ಕಾರ್ಮಿಕರು ಕೆಲಸ ಕಳೆದುಕೊಂಡರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಡಾ. ವಿಜಯ ಗುಂಟ್ರಾಳ, ಕನಕಪ್ಪ ಕೊಟಬಾಗಿ, ಪವನ ಸಗಬಾಲ, ನರಸಿಂಹ ಮಾದರ, ಪುಲ್ಲಯ್ಯ ಚಿಂಚಗೋಳ, ಗಂಗಯ್ಯ ಸಾಕೇನವರ, ಸುನಂದಾ ಮಾದರ, ಉಮೇಶ ನೀಲಣ್ಣವರ, ಸುನಂದಾ ಜಿಂಗಾಡೆ, ಜ್ಯೋತಿ ಚಲವಾದಿ, ಅನ್ನಪೂರ್ಣ ಕೊಟಬಾಗಿ, ಗಂಗಮ್ಮ ಸಿದ್ದರಾಮಪುರ, ಅನಿತಾ ಈನಗೊಂಡ ಇತರರಿದ್ದರು.