ಧಾರವಾಡ ರಾಜೀವಗಾಂಧಿ ನಗರದ ಶ್ರೀ ಅಲ್ಲೀಪುರ ಮಹಾದೇವ ತಾತನವರ ಮಠದಲ್ಲಿ ಶ್ರೀ ಮಹಾದೇವ ತಾತನವರ ಪುಣ್ಯಾರಾಧನೆ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ದಂಪತಿಗೆ ನರಗುಂದ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮೀಜಿ ಆಶೀರ್ವದಿಸಿದರು. ರುದ್ರೇಶ ಹರಕುಣಿ, ಗೋವಿಂದಪ್ಪ ಗೌಡಪ್ಪಗೋಳ, ಸಿದ್ಧಲಿಂಗಪ್ಪ ಹೊಸಕೇರಿ, ಸಂತೋಷ ಆನೆಗುಂದಿ, ಶಂಕರ ಕುಂಬಿ ಇದ್ದರು.
ಧಾರವಾಡ: ಬಡ ವರ್ಗದ ಜನರು ಸಾಲ ಸೋಲ ಮಾಡಿ ಆಡಂಬರಕ್ಕಾಗಿ ಮದುವೆಗೆ ಹೆಚ್ಚು ಖರ್ಚು ಮಾಡಬಾರದು. ಅದರ ಬದಲು ಮಠಗಳಲ್ಲಿ ಆಯೋಜಿಸುವ ಇಂಥ ಸಾಮೂಹಿಕ ವಿವಾಹಗಳಲ್ಲಿ ಮದುವೆ ಮಾಡಿಕೊಳ್ಳಬೇಕು ಎಂದು ನರಗುಂದ ವಿರಕ್ತಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.
ಇಲ್ಲಿನ ರಾಜೀವಗಾಂಧಿ ನಗರದಲ್ಲಿರುವ ಶ್ರೀ ಅಲ್ಲೀಪುರ ಮಹಾದೇವ ತಾತನವರ ಮಠದಲ್ಲಿ ತಾತನವರ 38ನೇ ವರ್ಷದ ಪುಣ್ಯಾರಾಧನೆ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಅಲ್ಲೀಪುರ ಮಹಾದೇವ ತಾತನವರು ಭಕ್ತರ ಉದ್ಧಾರಕ್ಕಾಗಿಯೇ ಜನಿಸಿದ ಶಿವಯೋಗಿ ಸಾಮ್ರಾಟರು. ಅವರು ನೆಲೆಸಿದ್ದ ಇಂಥ ಪುಣ್ಯಭೂಮಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವ ದಂಪತಿ ನಿಜವಾಗಿ ಪುಣ್ಯವಂತರು. ದಂಪತಿ ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದರು.
ಹುಬ್ಬಳ್ಳಿ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಮಾತನಾಡಿ, ಸಮಾಜದಲ್ಲಿ ದುಷ್ಟ ಶಕ್ತಿಗಳನ್ನು ದಮನ ಮಾಡಿ, ಶಿಷ್ಟರ ರಕ್ಷಣೆಗಾಗಿ ಸಾಕ್ಷಾತ್ ಶಿವನು ಶ್ರೀ ಅಲ್ಲೀಪುರ ಮಹಾದೇವ ತಾತನವರ ರೂಪದಲ್ಲಿ ಬಂದು ಭಕ್ತರನ್ನು ಉದ್ಧರಿಸಿದ್ದಾನೆ. ತಾತನ ಲೀಲಾ ಪವಾಡಗಳು ಅನೇಕ. ತಾತನ ನಾಮಸ್ಮರಣೆಯಿಂದಲೇ ಅನೇಕ ಕಷ್ಟಗಳು ದೂರವಾಗುತ್ತವೆ ಎಂದರು.
ಸಾಮೂಹಿಕ ವಿವಾಹದಲ್ಲಿ 21 ಜೋಡಿ ನವ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಲತಾ ಆನೆಗುಂದಿ ಪ್ರಾರ್ಥಿಸಿದರು. ಸಂತೋಷ ಆನೆಗುಂದಿ, ಸಿದ್ಧಲಿಂಗಪ್ಪ ಹೊಸಕೇರಿ ಕಾರ್ಯಕ್ರಮ ನಿರ್ವಹಿಸಿದರು. ಚಂದ್ರಣ್ಣ ಬೆಳಗಾವಿ, ಮಂಜುನಾಥ ಬೆಳಗಾವಿ, ಈರಣ್ಣ ಆಕಳವಾಡಿ, ಶಂಕರ ಕುಂಬಿ, ಶ್ರೀ ಮಠದ ಭಕ್ತರು ಉಪಸ್ಥಿತರಿದ್ದರು.
ರುದ್ರಾಭಿಷೇಕ: ಭಾನುವಾರ ಬೆಳಗ್ಗೆ 5ಕ್ಕೆ ತಾತನವರ ಗದ್ದುಗೆಗೆ ರುದ್ರಾಭಿಷೇಕ. ನಂತರ ಅಗ್ನಿಕುಂಡ ಕಾರ್ಯಕ್ರಮ. ಪಲ್ಲಕ್ಕಿ ಉತ್ಸವ, ಆರಾಧನಾ ಮಹೋತ್ಸವ ಜರುಗಿದವು.