money ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಸೇನೆ ಕಾರ್ಯಕರ್ತರು ಹುಬ್ಬಳ್ಳಿಯ ಹಳೇ ಕೋರ್ಟ್ ವೃತ್ತದ ಬಳಿಯ ಶ್ರೀ ಸಾಯಿ ಮಂದಿರದಲ್ಲಿ ಪ್ರತಿಭಟನೆ ನಡೆಸಿದರು.
ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಭಕ್ತರಿಂದ ಕಾಣಿಕೆ ಪಡೆಯುವುದನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮೋದ ಮುತಾಲಿಕ, ಶ್ರೀ ಸಾಯಿ ಸದ್ಭಕ್ತ ಮಂಡಳಿಯ ಆಡಳಿತ ಮಂಡಳಿಯವರು ಭಕ್ತರ ಹಣ ಲೂಟಿ ಮಾಡುತ್ತಿದ್ದಾರೆ.
ಹುಂಡಿಗೆ ಹಾಕಲಾದ ಹಣವನ್ನು ಸ್ವಹಿತಾಸಕ್ತಿಗೆ ಬಳಸಲಾಗುತ್ತಿದೆ. ಅನಾಥಾಶ್ರಮ, ವೃದ್ಧಾಶ್ರಮದ ಹೆಸರಿನಲ್ಲಿ ದರೋಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ದೇವಸ್ಥಾನದಲ್ಲಿ ಧಾರ್ವಿುಕ ಕಾರ್ಯಕ್ರಮಗಳು ನಡೆಯಬೇಕೇ ಹೊರತು ಟೇಬಲ್ ಟೆನ್ನಿಸ್ ಆಟವಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರಮೋದ ಮುತಾಲಿಕ, ಮಂದಿರದ ಮೂರನೇ ಮಹಡಿಯಲ್ಲಿ ನಡೆಯುತ್ತಿರುವ ಟೇಬಲ್ ಟೆನ್ನಿಸ್ ಆಟವನ್ನು ತಕ್ಷಣದಿಂದ ನಿಲ್ಲಿಸಬೇಕು ಎಂದು ಒತ್ಥಾಯಿಸಿದರು.
ದೇವಸ್ಥಾನದ ಅವ್ಯವಹಾರಗಳ ಸಾಕ್ಷಿಗಳನ್ನು ಜಿಲ್ಲಾಧಿಕಾರಿ ಅವರಿಗೆ ನೀಡಲಾಗಿದೆ. ಜಿಲ್ಲಾಧಿಕಾರಿ ಅವರು ನಿವೃತ್ತ ನ್ಯಾಯಾಧೀಶರನ್ನು ತನಿಖೆಗೆ ನೇಮಿಸಿದ್ದಾರೆ. ತನಿಖೆ ನಡೆಯುತ್ತಿರುವಾಗಲೇ ದೇಣಿಗೆ ಪಡೆಯುವ ಹಾಗೂ ಇನ್ನಿತರ ಅವ್ಯವಹಾರಗಳು ನಡೆಯುತ್ತಿವೆ.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಇತರ ಪದಾಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ನಡೆಸುತ್ತಿರುವ ತನಿಖೆಯ ಬಗ್ಗೆ ಗೌರವ ಇಲ್ಲವೇ ? ಎಂದು ಪ್ರಶ್ನಿಸಿದರು.
ಶ್ರೀಸಾಯಿ ದೇವಸ್ಥಾನದಲ್ಲಿ ನಡೆಸುತ್ತಿರುವ ಪೂಜೆ, ಆರತಿ, ಪ್ರಸಾದ ವಿತರಣೆಗೆ ಯಾವುದೇ ರೀತಿಯ ಅಡಚಣೆ ಇಲ್ಲ. ಆದರೆ, ತನಿಖೆ ಮುಗಿಯುವವರೆಗೂ ದೇವಸ್ಥಾನದ ಹುಂಡಿಯಲ್ಲಿನ ಹಣ ತೆಗೆಯಬಾರದು.
ತನಿಖೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ನಿದೋಷಿಗಳು ಎಂದು ಸಾಬೀತಾದಲ್ಲಿ ನಾವೇ ಅವರ ಬಳಿ ಕ್ಷಮೆ ಕೇಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮಹಾದೇವ ಮಾಶ್ಯಾಳ ಅವರೊಂದಿಗೆ ಸೇನಾ ಕಾರ್ಯಕರ್ತರು ವಾಗ್ವಾದ ನಡೆಸಿದರು.
ಕಾಣಿಕೆ ಪಡೆಯಬಾರದು, ದೇಣಿಗೆ ಸಂಗ್ರಹಿಸಬಾರದೆಂದು ಯಾವುದೇ ಅಧಿಕಾರಿಗಳು ಹೇಳಿಲ್ಲ. ಭಕ್ತರ ಆಗ್ರಹದ ಮೇರೆಗೆ ಟೇಬಲ್ ಟೆನ್ನಿಸ್ ಆಡಿಸಲಾಗುತ್ತಿದೆ ಎಂದು ಮಹಾದೇವ ಮಾಶ್ಯಾಳ ಸಮಜಾಯಿಸಿ ನೀಡಿದರು.
ಇದರಿಂದ ಆಕ್ರೋಶಗೊಂಡ ಶ್ರೀರಾಮ ಸೇನಾ ಕಾರ್ಯಕರ್ತರಲ್ಲಿ ಕೆಲವರು ಮಹಾದೇವ ಮಾಶ್ಯಾಳ ಮೇಲೆ ಹಲ್ಲೆಗೆ ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ಮಧ್ಯೆ ಪ್ರವೇಶಿಸಿ, ಪರಿಸ್ಥಿತಿ ಶಾಂತಗೊಳಿಸಿದರು.
ನಂತರ ದೇವಸ್ಥಾನದ ಒಳಗೆ ಇದ್ದ ಎರಡು ಹುಂಡಿಗಳಿಗೆ ಸೇನಾ ಕಾರ್ಯಕರ್ತರು ಬೀಗ ಜಡಿದರು. ವೃದ್ಧಾಶ್ರಮದ ಪೋಸ್ಟರ್ಗಳನ್ನು ಕಿತ್ತು ಹಾಕಿ, ಗೋಡೆಗಳಿಗೆ ಅಂಟಿಸಿದ್ದ ಸ್ಕ್ಯಾನರ್ಗಳನ್ನು ಹರಿದು ಹಾಕಿದರು. ಟೇಬಲ್ ಟೆನ್ನಿಸ್ ತರಬೇತಿದಾರರನ್ನು ಕರೆಯಿಸಿ, ತಕ್ಷಣದಿಂದ ತರಬೇತಿ ಸ್ಥಗಿತಗೊಳಿಸುವಂತೆ ಎಚ್ಚರಿಕೆ ನೀಡಿದರು.
ಮಂಜುನಾಥ ಕಾಟಕರ, ರಘು ಯಲ್ಲಕ್ಕನವರ, ಗುಣಧರ ಧಡೂತಿ, ಅಣ್ಣಪ್ಪ ದಿವಟಗಿ, ಮಹಾಂತೇಶ ತೊಂಗಳಿ, ಬಸು ದುರ್ಗದ, ಪ್ರವೀಣ ಮಾಳಡಕರ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮಂದಿರಕ್ಕೆ ನುಗ್ಗಿರುವುದು ಸರಿಯಲ್ಲ : ಶ್ರೀ ಸಾಯಿ ಮಂದಿರದ ಆಡಳಿತ ಮಂಡಳಿ ವಿರುದ್ಧ ಸಲ್ಲಿಸಿರುವ ದೂರರ್ಜಿ ಕುರಿತು ಈಗಾಗಲೇ ನಿವೃತ್ತ ನ್ಯಾಯಾಧೀಶರು ವಿಚಾರಣೆೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರು ಮಂದಿರಕ್ಕೆ ನುಗ್ಗಿದ್ದಾರೆ ಎಂದು ಮಂದಿರದ ಆಡಳಿತ ಮಂಡಳಿ ಅಧ್ಯಕ್ಷ ಮಹಾದೇವ ಮಾಶ್ಯಾಳ ಹೇಳಿದ್ದಾರೆ.
ಪ್ರಮೋದ ಮುತಾಲಿಕ ಮತ್ತು ಟಿ.ಎಸ್. ಮೋಹನಕುಮಾರ ಅವರು ಡಿಆರ್ ಕಚೇರಿಗೆ ನೀಡಿದ್ದ ದೂರರ್ಜಿ ಕುರಿತಂತೆ ಅಧಿಕಾರಿಗಳು ಈಗಾಗಲೇ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಹೆಚ್ಚಿನ ವಿಚಾರಣೆೆಗೆ ನಿವೃತ್ತ ನ್ಯಾಯಾಧೀಶರನ್ನು ನೇಮಿಸಿದ್ದು, ವಿಚಾರಣೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಆಡಳಿತ ಮಂಡಳಿ ಸಲ್ಲಿಸಿದೆ. ಈ ಕುರಿತಂತೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.