ವಿಮುಕ್ತ ದೇವದಾಸಿಯರಿಗೆ (devadasi) ಸರಿಯಾದ ಸಮಯಕ್ಕೆ ಮಾಸಾಶನ ನೀಡುವಂತೆ ಕರ್ನಾಟಕ ದಲಿತ ವಿಮೋಚನಾ ಸಮಿತಿ ಹುಬ್ಬಳ್ಳಿ ಶಹರ ಸಮಿತಿ ಪದಾಧಿಕಾರಿಗಳು, ಹುಬ್ಬಳ್ಳಿಯಲ್ಲಿ ಭಾನುವಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರಿಗೆ ಮನವಿ ಸಲ್ಲಿಸಿದರು.
ಹುಬ್ಬಳ್ಳಿ: ವಿಮುಕ್ತ ದೇವದಾಸಿಯರಿಗೆ (devadasi) ಸರಿಯಾದ ಸಮಯಕ್ಕೆ ಮಾಸಾಶನ ನೀಡುವಂತೆ ಕರ್ನಾಟಕ ದಲಿತ ವಿಮೋಚನಾ ಸಮಿತಿ ಹುಬ್ಬಳ್ಳಿ ಶಹರ ಸಮಿತಿ ಪದಾಧಿಕಾರಿಗಳು, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರಿಗೆ ನಗರದಲ್ಲಿ ಭಾನುವಾರ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ 46 ಸಾವಿರಕ್ಕೂ ಹೆಚ್ಚು ವಿಮುಕ್ತ ದೇವದಾಸಿಯರಿದ್ದಾರೆ. ರಾಜ್ಯ ಸರ್ಕಾರವು ಭೂಮಿ ಯೋಜನೆ, ಪ್ರತಿ ತಿಂಗಳು ಮಾಸಾಶನ, ವಸತಿ ಯೋಜನೆಯಡಿ ಸವಲತ್ತು ಕಲ್ಪಿಸಿದೆ. ಯಾವುದೂ ಸಮರ್ಪಕವಾಗಿ ದೊರೆಯುತ್ತಿಲ್ಲ. ದೇವದಾಸಿ ಪುನರ್ವಸತಿ ಯೋಜನಾ ಘಟಕವು ಹೊರಗುತ್ತಿಗೆ ಆಧಾರದ ಮೇಲಿದೆ. ಹಾಗಾಗಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಕೂಡಲೇ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಬೇಕು. ಮರು ಸಮೀಕ್ಷೆಯನ್ನೂ ಸರಿಯಾಗಿ ನಿರ್ವಹಿಸಿಲ್ಲ. ಇದರಿಂದ ವಿಮುಕ್ತ ದೇವದಾಸಿಯರಿಗೆ ಸಮಸ್ಯೆಯಾಗಿದೆ. ಕೂಡಲೇ ಸಮಸ್ಯೆ ಪರಿಹರಿಸುವಂತೆ ಕೋರಿ ಮನವಿ ಸಲ್ಲಿಸಿ ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ಡಾ. ನಾಗಲಕ್ಷ್ಮೀ ಚೌಧರಿ, ಈ ಎಲ್ಲ ವಿಷಯಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಸಮಿತಿ ಅಧ್ಯಕ್ಷ ಶ್ರೀಧರ ಕಂದಗಲ್, ಪ್ರಮುಖರಾದ ಶಾಂತವ್ವ ವಗರನಾಳ, ರೇಣುಕಾ ಸಂಶಿ, ಬಸವ್ವ ಖಾನಾಪೂರ, ದುರಗವ್ವ ಬಾಗಲವಾಡ, ಮಲ್ಲವ್ವ ತುರ್ವೀಹಾಳ, ರೇಣುಕಾ ಹೊಸಮನಿ, ಗುರುನಾಥ ಕ್ವಾಟಿ, ರವಿ ಚಲವಾದಿ, ಇರ್ಫಾನ್ ಡೋಬಿ, ಮಂಜು ಕಟಗೆಣ್ಣನವರ ಇತರರು ಇದ್ದರು.