ಸಚಿವ ಲಾಡ್ ವಜಾಗೊಳಿಸುವಂತೆ ಆಗ್ರಹ

ಹಾಲುಮತ ಸಮುದಾಯದಿಂದ ಪ್ರತಿಭಟನೆ
ಹಾಲುಮತ ಸಮುದಾಯದಿಂದ ಪ್ರತಿಭಟನೆ
Published on
ಧಾರವಾಡ: ಹಾಲುಮತ ಸಮುದಾಯದಿಂದ ಬಸವರಾಜ ದೇವರು ಸಾನ್ನಿಧ್ಯದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜ. 26ರಂದು ಆಯೋಜಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದ ಸಂದರ್ಭದಲ್ಲಿ ಸಚಿವ ಸಂತೋಷ ಲಾಡ್ ಅವರು ಸಂಗೊಳ್ಳಿ ರಾಯಣ್ಣ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಹಾಲುಮತ ಸಮುದಾಯದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಜಿಲ್ಲಾ ನ್ಯಾಯಾಲಯದ ಬಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿ ವರೆಗೆ ರ‍್ಯಾಲಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಗೌರವ ಸಮರ್ಪಣೆ ಕಾರ್ಯಕ್ರಮದ ವೇಳೆ ಅದೇ ವೃತ್ತದ ಸಮೀಪದ ಹೋಟೆಲ್‌ಗೆ ಆಗಮಿಸಿದ್ದರಿಂದ ಸಚಿವರ ಲಾಡ್ ಅವರನ್ನು ಆಮಂತ್ರಿಸಲಾಗಿತ್ತು. ಸಚಿವರು ಏಕವಚನದಲ್ಲಿ ಸ್ವಾಮೀಜಿ ಮತ್ತು ಆಯೋಜಕರನ್ನು ಸಂಬೋಧಿಸಿ ಅಪಮಾನ ಮಾಡಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದೂ ಗೌರವಾರ್ಪಣೆ ಮಾಡದೇ ಹೋದರು. ಸದಾ ಸಂವಿಧಾನ, ದೇಶಭಕ್ತಿ, ಪ್ರಜಾಪ್ರಭುತ್ವದ ಮಾತುಗಳ ಬೋಧನೆ ಮಾಡುವ ಸಚಿವ ಲಾಡ್ ಅವರಿಗೆ ತಾವು ಮಾಡಿರುವ ತಪ್ಪಿನ ಅರಿವಾಗದೇ, ಕ್ಷಮೆಯಾಚಿಸದೆ ಅಧಿಕಾರ ದರ್ಪ ತೋರಿಸುತ್ತಿರುವುದು ಖಂಡನೀಯ. ದೇಶಭಕ್ತ, ಹುತಾತ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರಿಗೆ ಮಾಡಿರುವ ಅವಮಾನ ಹಾಗೂ ಉದ್ದಟತನ ತೋರಿಸಿರುವ ಸಂತೋಷ ಲಾಡ್ ಅವರನ್ನು ಸಚಿವ ಸಂಪುಟದಿoದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಮಾತನಾಡಿ, ಸಚಿವ ಸಂತೋಷ ಲಾಡ್ ಅವರು ಕ್ಷಮೆ ಕೇಳದಿದ್ದರೆ ರಾಜ್ಯದ ಮೂಲೆ ಮೂಲೆಗಳಿಂದ ಸಮುದಾಯದ ಮುಖಂಡರು, ಜನರನ್ನು ಕರೆಯಿಸಿ ಜುಬಿಲಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಬಳಿಕ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.
ದೇವರಾಜ ಕಂಬಳಿ, ರಾಜೇಶ್ವರಿ ಸಾಲಗಟ್ಟಿ, ಮಂಜುನಾಥ ಮಕ್ಕಳಗೇರಿ, ರ‍್ಯಾವಪ್ಪ ಐರಣಿ, ಮಂಜುನಾಥ ನಡಟ್ಟಿ, ಪ್ರಕಾಶ ಕಿತ್ತೂರ, ಮಂಜು ಕಿತ್ತೂರು, ಬಸವರಾಜ ಬಾಳಗಿ, ಸುರೇಶ ಹೆಬ್ಬಳ್ಳಿ, ಬಸವರಾಜ ಬಡಿಗೇರ, ಶಿವು ಕಾಸಳಿ, ಶಿವು ಬೆಳ್ಳಾರ, ಮಡಿವಾಳಪ್ಪ ಬಿದರಗಡ್ಡಿ, ನವೀನ ಮಲ್ಲೂರ, ಗುರುಶಾಂತ ಹಿರೇಮಠ, ನಾಗರಾಜ ಗಾಣಿಗೇರ, ರವಿ ಐರಾಣಿ, ಟಿ.ಡಿ. ಪಾಟೀಲ, ಚೇತನ ಮೇಟಿ, ಮಲ್ಲಿಕಾರ್ಜುನ ದೇವಣ್ಣವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net