ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ ಆಗ್ರಹ
ಶ್ರೀರಾಮಸೇನೆ ಕಾರ್ಯಕರ್ತರಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
Published on:
Copied
Follow Us
ಧಾರವಾಡ: ದೇಶಾದ್ಯಂತ ಸಂರ್ಪೂಣ ಗೋಹತ್ಯೆ ನಿಷೇಧ ಜಾರಿಗೊಳಿಸಬೇಕು ಹಾಗೂ ಗೋಮಾತೆಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ನಗರದ ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಸೋಮವಾರ "ಗೋಮಾತೆಯ ಗೌರವದ ಅಭಿಯಾನ' ಮೂಲಕ ಪ್ರತಿಭಟನಾ ರ್ಯಾಲಿ ನಡೆಸಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಗೋ ಸಂರಕ್ಷಣೆಗೆ ಕಠಿಣ ಕಾನೂನು ಜಾರಿಗೊಳಿಸಬೇಕು ಹಾಗೂ ಗೋಹತ್ಯೆಯನ್ನು ದೇಶಾದ್ಯಂತ ಸಂರ್ಪೂಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಮಾತನಾಡಿ, ಸ್ವಾತಂತ್ರ್ಯ ಬಂದು 80 ವರ್ಷ ಆದರೂ ಗೋವುಗಳ ರಕ್ತ ನಿಲ್ಲಿಸಲು ಆಗುತ್ತಿಲ್ಲ. ಈ ನಿರ್ಲಜ್ಜ ರಾಜಕಾರಣಿಗಳಿಗೆ ಗೋವಿನ ಹಾಲು, ಮೊಸರು, ತುಪ್ಪ ಬೇಕು. ಕೊನೆಗೆ ಅದರ ಸಗಣಿಯೂ ಇವರಿಗೆ ಬೇಕು. ಆದರೆ, ಗೋವು ಹತ್ಯೆ ನಿಲ್ಲಿಸುವುದು ಇವರಿಗೆ ಬೇಡ. ಕೇಂದ್ರ ಸರ್ಕಾರ ಈ ಬಗ್ಗೆ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದಿದೆ. ಮೋದಿ ಅವರು ಗೋವಿನ ವೇದನೆ ಅರ್ಥ ಮಾಡಿಕೊಳ್ಳಬೇಕು.
ದೇಶದಲ್ಲಿ ಗೋವುಗಳ ನಿರಂತರ ಹತ್ಯೆಯಾಗುತ್ತಿದೆ. ಅವುಗಳ ಮಾಂಸ ರಫ್ತಾಗುತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ಅವರಿಗೆ ಇದೆಲ್ಲ ಕಾಣುತ್ತಿಲ್ಲವೆ? ಮೋದಿ ಅವರೊಬ್ಬರೇ ಈಗ ಹಿಂದೂಗಳಿಗೆ, ಗೋವುಗಳಿಗೆ ರಕ್ಷಕರಾಗಿದ್ದಾರೆ. ಅವರೇ ಈ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಗೋಮಾಳ ಜಾಗಗಳನ್ನು ರಕ್ಷಣೆ ಮಾಡಿ ಅವುಗಳನ್ನು ಗೋವುಗಳಿಗೆ ಉಳಿಸಬೇಕು. ಹೀಗಾಗಿಯೇ ದೇಶದ ಎಲ್ಲ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ನಾವು ಮನವಿ ಸಲ್ಲಿಸುತ್ತಿದ್ದೇವೆ ಎಂದರು.
ರಾಜ್ಯದಲ್ಲಿ ಗೋಹತ್ಯೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಇದು ಕಾಂಗ್ರೆಸ್ ಸರ್ಕಾರದ ಗಮನದಲ್ಲಿರಬೇಕು. ಗೋಹತ್ಯೆ ತಡೆಯಬೇಕು ಎಂದು ಒತ್ತಾಯಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ರವಾನಿಸಿದರು.
ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಅಧಿಕಾರಿ ಕೇಶವರಾಜು, ಜೈನ್ ಪಾಟೀಲ, ಆರ್.ಡಿ. ಕುಲಕಣಿರ್, ಸವಿತಾ ಎನ್.ಎಸ್., ಅಣ್ಣಪ್ಪ ದೀವಟಗಿ, ಮಂಜುನಾಥ ಕಾಟಕರ, ಮೈಲಾರ ಗುಡ್ಡಪ್ಪನವರ, ಸಿದ್ದು ಹಿರೇಮಠ, ಗುರುಶಾಂತ ಹಿರೇಮಠ, ಸೋಮು ಚನ್ನಶೆಟ್ಟಿ ಇತರರಿದ್ದರು.