ಪ್ರೊ. ದೇವರಾಜ ಅಮಾನತಿಗೆ ಎಬಿವಿಪಿಯಿಂದ ಕವಿವಿ ಆಡಳಿತ ಕಚೇರಿ ಎದುರು ಪ್ರತಿಭಟನೆ
ಎಬಿವಿಪಿ ಯಿಂದ ಪ್ರತಿಭಟನೆ
Published on:
Copied
Follow Us
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ದೇವರಾಜ ಅವರು ಪಿಎಚ್.ಡಿ ವಿದ್ಯಾರ್ಥಿನಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿ ವಿಶ್ವವಿದ್ಯಾಲಯದ ಘನತೆ ಹಾಳು ಮಾಡಿದ್ದಾರೆ. ಕೂಡಲೇ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ನಿಂದ ಗುರುವಾರ ಕವಿವಿ ಆಡಳಿತ ಮಂಡಳಿ ಎದುರು ಪ್ರತಿಭಟನೆ ನಡೆಯಿತು.
ಆಡಳಿತ ಮಂಡಳಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಪ್ರೊ. ದೇವರಾಜ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರೊ. ದೇವರಾಜ ಅವರು ತಮ್ಮಲ್ಲಿನ ಪಿಎಚ್.ಡಿ ಮಾಡಲು ಬಂದ ವಿದ್ಯಾರ್ಥಿನಿಯೊಂದಿಗೆ ಸಂಬಂಧ ಬೆಳೆಸಿದ್ದಲ್ಲದೇ ಆಕೆ ಬಿಟ್ಟು ಹೋದ ಮೇಲೂ ಆಕೆಯನ್ನು ಮರಳಿ ಕರೆಯಿಸುವಂತೆ ಇತರ ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ್ದಾರೆ. ಆದರೂ ಆತನ ಮೇಲೆ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಪ್ರೊ. ದೇವರಾಜ ಅವರನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅವರ ಬಳಿ ಪಿಎಚ್.ಡಿ ಮಾಡುವ ವಿದ್ಯಾರ್ಥಿಗಳಿಗೆ ಬೇರೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕುಲಪತಿ ಪ್ರೊ. ಎ.ಎಂ. ಖಾನ್ ಅವರು, ಪ್ರೊ. ದೇವರಾಜ ಅವರ ತನಿಖೆಗೆ ಸಮಿತಿ ರಚಿಸಲಾಗಿದೆ. ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗೆ ಪಿಎಚ್.ಡಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಎಬಿವಿಪಿ ರಾಜ್ಯ ಕಾರ್ಯದರ್ಶಿ ದರ್ಶನ್ ಹೆಗಡೆ, ಸಹ ಕಾರ್ಯದರ್ಶಿ ಹನುಮಂತ ಬಗಲಿ, ಸುಮಿತ್ ಘೋರ್ಪಡೆ, ಹಣಮಂತ ನಾಯಕ, ಅಭಿಷೇಕ ಲಮಾಣಿ, ಶ್ರೀಶೈಲ ಇತರರಿದ್ದರು.