ಎತ್ತಿಗೆ ಚಿಕಿತ್ಸೆ ನೀಡಲು ಹಣಕ್ಕೆ ಬೇಡಿಕೆ demand for money

ಕಲಘಟಗಿ ಪಟ್ಟಣದಲ್ಲಿ ಕಾಲು ಮೂಳೆ ಮುರಿದಿದ್ದರಿಂದ ಒದ್ದಾಡಿದ ಎತ್ತು.
ಕಲಘಟಗಿ ಪಟ್ಟಣದಲ್ಲಿ ಕಾಲು ಮೂಳೆ ಮುರಿದಿದ್ದರಿಂದ ಒದ್ದಾಡಿದ ಎತ್ತು.
Published on
ಕಲಘಟಗಿ: ಕಾಲು ಮುರಿದುಕೊಂಡಿದ್ದ ಎತ್ತಿಗೆ ಚಿಕಿತ್ಸೆ ನೀಡಲು ಹಣ (demand money) ಕೇಳಿದ್ದರಿಂದ ಪಟ್ಟಣದ ಪಶು ಇಲಾಖೆಗೆ ರೈತರು ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಹಳಿಯಾಳ ರಸ್ತೆ ಪಕ್ಕದಲ್ಲಿ ರೈತ ಲಕ್ಷ್ಮಣ ವಾಘಮೋಡೆ ಅವರಿಗೆ ಸೇರಿದ ಎತ್ತು ರಸ್ತೆ ದಾಟುವಾಗ ಕಾಲಿನ ಮೂಳೆ ಮುರಿದುಕೊಂಡು ನರಳಾಡುತ್ತಿತ್ತು. ಆಗ ಸಾರ್ವಜನಿಕರು, ಪಶು ಇಲಾಖೆಗೆ ಕರೆ ಮಾಡಿದರೂ ಸ್ಪಂದಿಸಲಿಲ್ಲ. ಹೀಗಾಗಿ, ರೈತರು ಪಶು ಆಸ್ಪತ್ರೆಗೆ ಬಂದು ಸಿಬ್ಬಂದಿಗೆ ಚಿಕಿತ್ಸೆ ನೀಡಲು ಬರುವಂತೆ ಕರೆದಿದ್ದಾರೆ. ಆಗ ಸಿಬ್ಬಂದಿ, ಹಣ ಕೊಟ್ಟರೆ ಮಾತ್ರ ಬರುವುದಾಗಿ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು, ಎತ್ತನ್ನು ವಾಹನದಲ್ಲಿ ಹೇರಿಕೊಂಡು ಇಲಾಖೆ ಆವರಣಕ್ಕೆ ಬಂದು ಪ್ರತಿಭಟನೆ ನಡೆಸಿದರು. 
ಇಷ್ಟಾದರೂ ಪಶು ವೈದ್ಯಾಧಿಕಾರಿ ಸೇರಿದಂತೆ ಯಾವೊಬ್ಬ ಸಿಬ್ಬಂದಿಯೂ ಇರಲಿಲ್ಲ. ನಂತರ ಪಶು ವೈದ್ಯಾಧಿಕಾರಿ ದೇವೇಂದ್ರಪ್ಪ ಲಮಾಣಿ ಬಂದರಾದರೂ ವೈದ್ಯರನ್ನು ಕರೆಸಲಿಲ್ಲ.  ಹಣ ಕೇಳಿದ ಸಿಬ್ಬಂದಿ ಸ್ಥಳಕ್ಕೆ ಕರೆಸಬೇಕು ಎಂದು ರೈತರು ಪಟ್ಟು ಹಿಡಿದರು. ಕೊನೆಗೆ ವೈದ್ಯರನ್ನು ಕರೆಸಿ, ಎತ್ತಿಗೆ ತಾತ್ಕಾಲಿಕ ಚಿಕಿತ್ಸೆ ನೀಡಲಾಗಿದೆ. ಇಷ್ಟೆಲ್ಲ ನಡೆಯುವ ಹೊತ್ತಿಗೆ ರಾತ್ರಿ 8 ಗಂಟೆ ಆಗಿತ್ತು. 4 ಗಂಟೆ ಸುಮಾರಿಗೆ ಕಾಲು ಮುರಿದುಕೊಂಡಿದ್ದ ಎತ್ತಿಗೆ 4 ತಾಸಿನ ನಂತರ ಚಿಕಿತ್ಸೆ ದೊರೆಯುವಂತಾಯಿತು.
ಪಟ್ಟಣದ ಪಶು ಆಸ್ಪತ್ರೆಯಲ್ಲಿ ಜಾನುವಾರುಗಳಿಗೆ ಸರಿಯಾಗಿ ಚಿಕಿತ್ಸೆ ನೀಡುವುದಿಲ್ಲ. ಔಷಧಗಳು ಇದ್ದರೂ ಅಂಗಡಿಗಳಿಂದ ತರಲೂ ಸೂಚಿಸುತ್ತಾರೆ. ಔಷಧಗಳನ್ನು ಮಾರಾಟ ಮಾಡುತ್ತಿದ್ದಾರೆ. ಎಲ್ಲದಕ್ಕೂ ಸಿಬ್ಬಂದಿ ಲಂಚ ಕೇಳುತ್ತಾರೆ. ತುರ್ತು ಸಂದರ್ಭದಲ್ಲಿ ಕರೆ ಮಾಡಿದರೆ, ಸ್ಪಂದಿಸುವುದಿಲ್ಲ ಎಂದು ರೈತರು ಆರೋಪಿಸಿದರು.
"

ನಮ್ಮ ಇಲಾಖೆ ಸಿಬ್ಬಂದಿ ಚಿಕಿತ್ಸೆಗಾಗಿ ಲಂಚ ಕೇಳಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಮುಂದೆ ಈ ರೀತಿಯ ಘಟನೆಗಳು ಜರುಗದಂತೆ ಹಾಗೂ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟ ಬಗ್ಗೆ ಮಾಹಿತಿ ಕಲೆ ಹಾಕಿ ಕೈಗೊಳ್ಳಲಾಗುವುದು. 

ದೇವೇಂದ್ರಪ್ಪ ಲಮಾಣಿ, ಪಶು ವೈದ್ಯಾಧಿಕಾರಿ.

"

ನಮ್ಮ ಎತ್ತಿನ ಕಾಲಿನ ಎಡಗಾಲಿನ ಮೂಳೆ ಮುರಿದಿದ್ದರಿಂದ ಚಿಕಿತ್ಸೆ ನೀಡುವಂತೆ ಕೇಳಿದರೆ, ಪಶು ಇಲಾಖೆ ಸಿಬ್ಬಂದಿ ಹಣ ಕೇಳಿದ್ದಲ್ಲದೆ, ನನಗೆ ಬರಲು ಆಗುವುದಿಲ್ಲ ಎಂದರು. ಇದರಿಂದಾಗಿ ಸುಮಾರು ನಾಲ್ಕೈದು ತಾಸು ನಮ್ಮ ಎತ್ತು ಬಿದ್ದು ನರಳಾಡಿತು. 

 ಲಕ್ಷ್ಮಣ ವಾಘಮೋಡೆ, ರೈತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net