ಧಾರವಾಡ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ, ಬಿಸಿಎಂ ಇಲಾಖೆಗಳಲ್ಲಿನ ವಸತಿ ನಿಲಯ ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸುವಂತೆ ಒತ್ತಾಯಿಸಿ ಎಐಯುಟಿಯುಸಿ ಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ಧಾರವಾಡ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.
ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಆದೇಶ ಮಾಡಿದರೂ ಮೂರೂ ಇಲಾಖೆಗಳು ಜಾರಿಗೊಳಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸಮಿತಿಯ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ, ಪರಿಷ್ಕೃತ ವೇತನ ಜಾರಿಗೆ ರಾಜ್ಯದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಆದೇಶ ಮಾಡಿ, ಇದೀಗ ಆರ್ಥಿಕ ಇಲಾಖೆಯಿಂದ ಅನುಮೋದನೆ ಸಿಕ್ಕಿಲ್ಲವೆಂದು ನೆಪ ಹೇಳುತ್ತಿದ್ದಾರೆ. ಆದರೆ, ಕಲಬುರಗಿ, ರಾಯಚೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಪರಿಷ್ಕೃತ ವೇತನ ನೀಡಲು ಆದೇಶ ಹೊರಡಿಸಿ, ಹೊಸ ವೇತನದ ಹಣ ಕೂಡ ಕಾರ್ಮಿಕರ ಖಾತೆಗೆ ಸಂದಾಯವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಮಾತ್ರ ತಡೆ ಹಿಡಿಯಲಾಗಿದೆ.
ಬಿಸಿಎಂ ಇಲಾಖೆಯಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಜಿಲ್ಲಾ ಕೇಂದ್ರದಲ್ಲಿ ಪರಿಷ್ಕೃತ ವೇತನವನ್ನು ಕಾರ್ಮಿಕರ ಖಾತೆಗಳಿಗೆ ಹಾಕಿದ್ದಾರಾದರೂ ಕುಂದಗೋಳ ಸೇರಿ ತಾಲೂಕು ಕೇಂದ್ರಗಳಲ್ಲಿ ಕಾರ್ಮಿಕರ ಖಾತೆಗಳಿಗೆ ಈ ವೇತನ ಬಂದಿಲ್ಲ. ಹಾಕಿದ ಬಿಲ್‌ಅನ್ನು ವಾಪಸ್ ಪಡೆಯಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಆದೇಶ ಮಾಡಿದರೂ ಪರಿಷ್ಕೃತ ವೇತನ ಕಾರ್ಮಿಕರ ಖಾತೆಗಳಿಗೆ ಹಾಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಪಿಎಫ್, ಇಎಸ್‌ಐ, ಓಟಿ ವೇತನ, ಎಂಟು ಗಂಟೆಗಳ ಕೆಲಸ, ರಾಷ್ಟ್ರೀಯ ಹಬ್ಬದ ರಜೆ ವೇತನ, ಗ್ರಾಚ್ಯುಟಿ ಸೇರಿ ಎಲ್ಲ ಕಾನೂನು ಬದ್ಧ ಸೌಲಭ್ಯಗಳನ್ನು ಪರಿಷ್ಕೃತ ವೇತನದ ಆಧಾರದ ಮೇಲೆ ಪಾವತಿಸಬೇಕು. ಎಲ್ಲ ಗುತ್ತಿಗೆ ಕಾರ್ಮಿಕರಿಗೆ ಕೂಡಲೇ ಹಾಸ್ಟೆಲ್‌ಗಳಲ್ಲಿ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಇಲಾಖೆಗಳು ಮೇ 22ರಿಂದ ಪರಿಷ್ಕೃತ ವೇತನ ಜಾರಿ ಮಾಡುವಲ್ಲಿ ಮೀನಮೇಶ ಎಣಿದ್ದೇ ಆದರೆ, ಕಾರ್ಮಿಕ ಹೋರಾಟಗಳು ಭುಗಿಲೇಳುವುದು ಗ್ಯಾರಂಟಿ ಎಂದು ಎಚ್ಚರಿಸಿದರು.