ಧಾರವಾಡ: ಜಿಲ್ಲೆಯ ವಿವಿಧ ಇಲಾಖೆಗಳ ವಸತಿ ನಿಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸಬೇಕು ಹಾಗೂ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕ ಸಂಘಟನೆ ಜಿಲ್ಲಾ ಸಮಿತಿ ಸದಸ್ಯರು, ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಸಂಘಟನೆ ನೇತೃತ್ವದಲ್ಲಿ ಗುರುವಾರ ಜಿಲ್ಲಾಽಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ. ರಾಜ್ಯ ಸರ್ಕಾರ ಮೇ ೨೨ರಂದು ರಾಜ್ಯದ ೮೧ ನಿಗದಿತ ಉದ್ಯೋಗಗಳಿಗೆ ಕನಿಷ್ಠ ವೇತನ ಪರಿಷ್ಕರಿಸಿ, ಅಂತಿಮ ಕ್ರೂಢೀಕೃತ ಅಽಸೂಚನೆ ಹೊರಡಿಸಿದೆ. ಅದರ ಪ್ರಕಾರ ಹೊಸ ವೇತನ ಶ್ರೇಣಿಯು ಮೇ ೨೨ರಿಂದಲೇ ಜಾರಿಗೆ ಬಂದಿದ್ದು, ತಕ್ಷಣ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಇಪಿಎಫ್, ಇಎಸ್‌ಐ, ಓಟಿ ವೇತನ, ೮ ಗಂಟೆ ಕೆಲಸ, ರಾಷ್ತ್ರೀಯ ಹಬ್ಬದ ರಜೆ ವೇತನ, ಗ್ಯಾಚ್ಯುಟಿ ಸೇರಿ ಎಲ್ಲ ಕಾನೂನುಬದ್ಧ ಸೌಲಭ್ಯಗಳನ್ನು ಪರಿಷ್ಕೃತ ವೇತನದ ಆಧಾರದ ಮೇಲೆ ಪಾವತಿಸಬೇಕು. ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.