ಧಾರವಾಡ: ಮುಂಗಾರು ಮೆಳೆ ಕೊರತೆಯಿಂದ ಮುಂಗಾರು ಬೆಳೆಗಳು ಒಣಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ತುರ್ತಾಗಿ ವಿಶೇಷ ತಂಡದಿಂದ ಸಮಿಕ್ಷೆ ಮಾಡಿಸಿ, ಪ್ರತಿ ಹೆಕ್ಟೇರ್‌ಗೆ 50 ಸಾವಿರ ರೂ. ಸಹಾಯ ಧನದೊಂದಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿ ಜನತಾದಳ (ಸಂಯುಕ್ತ) ಧಾರವಾಡ ಜಿಲ್ಲಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಅವರು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರ ಮೂಲಕ ಬುಧವಾರ ಸರ್ಕಾರಕ್ಕೆ ಮನವಿ ರವಾನಿಸಿದರು.
ಜಿಲ್ಲೆಯಲ್ಲಿ ರೈತರು ಮುಂಗಾರು ಮಳೆಯಾಶ್ರೀತ ಬೆಳೆಗಳಾದ ಶೇಂಗಾ, ಹೆಸರು, ಉದ್ದು, ಸೋಯಾಬಿನ್, ಭತ್ತ, ಹತ್ತಿ, ಕಬ್ಬು ಸೇರಿ ಇತ್ಯಾದಿ ಬೆಳೆಯನ್ನು ಶೇ. 80 ರಷ್ಟು ಬಿತ್ತನೆ ಮಾಡಿದ್ದಾರೆ. ಮಳೆ ಕೊರತೆಯಾಗಿದೆ. ಬೀಜ, ಗೊಬ್ಬರ, ಬಿತ್ತನೆಯ ಖರ್ಚುವೆಚ್ಚ ಎಲ್ಲವೂ ರೈತನಿಗೆ ಹೊರೆಯಾಗಿದೆ.
ಒಂದೊಮ್ಮೆ ಬೆಳೆ ಸರಿಯಾಗಿ ಬಂದರೂ ಬೆಳೆದ ಬೆಲೆಗೆ ಸರಿಯಾದ ಬೆಂಬಲ ಬೆಲೆ ಸಿಗದೆ, ರೈತರು ನಿರಂತರವಾಗಿ ಆತಂಕದ ಪರಿಸ್ಥಿತಿಯಲ್ಲಿ ಇರುತ್ತಾರೆ. ರೈತರಿಗೆ ಬೆಳೆ ಸಾಲ ಕೊಡಲು ಯಾವುದೇ ಮಾನದಂಡ ಪರಿಶೀಲಿಸದೆ ಸಾಲ ನೀಡುವಂತೆ ಬ್ಯಾಂಕ್‌ಗಳಿಗೆ ಕೂಡಲೇ ನಿರ್ದೇಶಿಸಬೇಕು. ಜಿಲ್ಲೆಯ ರೈತ ಮುಖಂಡರಗಳ ಸಭೆ ಕರೆದು ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಸಮಸ್ಯೆ ನಿವಾರಿಸಿ, ಆಶ್ರಯಕ್ಕೆ ನಿಲ್ಲಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.