ರಾಜ್ಯವನ್ನು ಬರ ಪೀಡಿತ ಘೋಷಿಸಿ drought

drought ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕಿನ ಹೊಲಗಳಲ್ಲಿ ಕಮರಿದ ಹೆಸರು ಬೆಳೆ ವೀಕ್ಷಿಸಿದ ಮುಖ್ಯ ಸಚೇತನ ಎನ್. ರವಿಕುಮಾರ ನೇತೃತ್ವದ ಬಿಜೆಪಿ ಬರಗಾಲ ಅಧ್ಯಯನ ತಂಡ.
drought ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕಿನ ಹೊಲಗಳಲ್ಲಿ ಕಮರಿದ ಹೆಸರು ಬೆಳೆ ವೀಕ್ಷಿಸಿದ ಮುಖ್ಯ ಸಚೇತನ ಎನ್. ರವಿಕುಮಾರ ನೇತೃತ್ವದ ಬಿಜೆಪಿ ಬರಗಾಲ ಅಧ್ಯಯನ ತಂಡ.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಕ್ಕೆ ಮುಖ್ಯ ಸಚೇತಕ ಎನ್. ರವಿಕುಮಾರ ಒತ್ತಾಯ
  • ಸರ್ಕಾರವೇ ಬೆಳೆ ವಿಮೆಯ ಹಣ ಪಾವತಿಸಬೇಕು
  • ರೈತರಿಗೆ ಸಾಕಷ್ಟು ನಷ್ಟವಾಗಿದೆ.

ಹುಬ್ಬಳ್ಳಿ :

drought ಸರ್ಕಾರ ತಕ್ಷಣ ರಾಜ್ಯವನ್ನು ಬರ ಪೀಡಿತವೆಂದು ಘೋಷಿಸಿ, ಪ್ರತಿ ಎಕರೆಗೆ 50 ಸಾವಿರ ರೂ. ಗಳಂತೆ ರೈತರಿಗೆ ಪರಿಹಾರ ನೀಡಬೇಕು. ಇದರಲ್ಲಿ ಮೊದಲ ಹಂತವಾಗಿ ತಕ್ಷಣ 25 ಸಾವಿರ ರೂ. ರೈತರ ಖಾತೆಗೆ ಜಮೆ ಮಾಡಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ ಹೇಳಿದರು.

ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕಿನ ಯರಿ ನಾರಾಯಣಪುರ, ಇಂಗಳಳ್ಳಿ, ನಲವಡಿ, ಶಿಶ್ವಿನಹಳ್ಳಿಗಳಲ್ಲಿನ ಹೊಲಗಳಿಗೆ ಬುಧವಾರ ಬಿಜೆಪಿ ಬರ ಅಧ್ಯಯನ ತಂಡದೊಂದಿಗೆ ಭೇಟಿ ನೀಡಿ ಅವರು ಮಾತನಾಡಿದರು.

ರೈತರ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು. ಬೆಳೆ ವಿಮೆ ಪಾವತಿಸಲು ಸಹ ರೈತರ ಬಳಿ ಹಣ ಇಲ್ಲ. ಹೀಗಾಗಿ, ಸರ್ಕಾರವೇ ಬೆಳೆ ವಿಮೆಯ ಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯ 6 ತಂಡಗಳು ರಾಜ್ಯದ ವಿವಿಧೆಡೆ ಬರ ಸ್ಥಿತಿ ಪರಿಶೀಲನೆ ನಡೆಸಿವೆ. ಈ ವರದಿಯನ್ನು ಅಧಿವೇಶನದಲ್ಲಿ ಮಂಡಿಸಲಾಗುವುದು. ಸರ್ಕಾರ ರಾಜ್ಯವನ್ನು ಬರ ಪೀಡಿತವೆಂದು ಘೋಷಿಸದೇ ಹೋದರೆ ಸದನ ನಡೆಯಲು ಬಿಡುವುದಿಲ್ಲ.

ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಹಿಂದೆಂದೂ ಕಂಡರಿಯದ ಬರಗಾಲ ರಾಜ್ಯವನ್ನು ಆವರಿಸಿದೆ. ಪ್ರತಿ ಎಕರೆಗೆ 10 ರಿಂದ 12 ಕ್ವಿಂಟಾಲ್ ಹೆಸರುಕಾಳು ಬರುತ್ತಿದ್ದ ರೈತರಿಗೆ, ಇದೀಗ 10 ಕೆಜಿಯೂ ಬಂದಿಲ್ಲ. ಇದೇ ಪರಿಸ್ಥಿತಿ ಹತ್ತಿ, ಶೇಂಗಾ, ಉದ್ದುಗಳಿಗೂ ಇದೆ ಎಂದು ಹೇಳಿದರು.

ಕೆಲವೆಡೆ ಬೆಳೆ ಬರುತ್ತಿಲ್ಲವೆಂಬ ಕಾರಣಕ್ಕೆ ಹೊಲವನ್ನು ಹರಗುತ್ತಿದ್ದಾರೆ. ರೈತರಿಗೆ ಸಾಕಷ್ಟು ನಷ್ಟವಾಗಿದೆ. ರಾಜ್ಯ ಸರ್ಕಾರ ಇದುವರೆಗೆ ರೈತರಿಗೆ ಕವಡೆ ಕಾಸನ್ನೂ ಪರಿಹಾರವಾಗಿ ನೀಡಿಲ್ಲ ಎಂದು ಟೀಕಿಸಿದರು.

ಒಂದು ತಿಂಗಳ ಹಿಂದೆ ಸರ್ಕಾರ ಇರಲಿಲ್ಲವೇ? ಎಂದು ಪ್ರಶ್ನಿಸಿದ ಎನ್. ರವಿಕುಮಾರ, ಸಂಪುಟ ವಿಸ್ತರಣೆ ನಂತರ ನೂತನ ಸಚಿವರಿಗೆ ಬರಗಾಲದ ಪ್ರವಾಸ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ನೀಡಿರುವ ಸೂಚನೆ ಕೇವಲ ನಾಟಕೀಯ.

ಸರ್ಕಾರ ಕಣ್ಣಿದ್ದೂ ಕುರುಡನಂತೆ ವರ್ತಿಸುತ್ತಿದೆ. ಈಗಿನ ಸರ್ಕಾರದ ಬುದ್ಧಿ ಭ್ರಮಣೆಯಾಗಿದೆ ಎಂದು ಲೇವಡಿ ಮಾಡಿದರು.

ಒಂದು ತಿಂಗಳ ಹಿಂದೆಯೇ ಬರಗಾಲ ಅಧ್ಯಯನ ಪ್ರವಾಸವನ್ನು ಸರ್ಕಾರ ಮಾಡಬೇಕಿತ್ತು. ಇಷ್ಟೊತ್ತಿಗೆ ರೈತರ ಖಾತೆಗೆ ಪರಿಹಾರದ ಹಣ ಬರಬೇಕಿತ್ತು ಎಂದು ಹೇಳಿದರು.

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರೈತರ ಖಾತೆಗೆ ತಕ್ಷಣ ಹಣ ಜಮಾ ಮಾಡಿದ್ದರು. ಕುಡಿಯುವ ನೀರಿಗೂ ಅನುದಾನ ನೀಡಿದ್ದರು. ಮೇವು ಬ್ಯಾಂಕ್ ಸ್ಥಾಪಿಸಿದ್ದರು. ಆದರೆ, ಈಗಿನ ಸರ್ಕಾರ ಬರಗಾಲ ಆವರಿಸಿದ್ದರೂ, ರಾಜ್ಯವನ್ನು ಬರ ಪೀಡಿತವೆಂದು ಘೋಷಿಸುತ್ತಿಲ್ಲ ಎಂದು ದೂರದರು.

ಬರ ಪರಿಹಾರ ಕೇಳಿದ ತಕ್ಷಣ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುವುದನ್ನು ಬಿಡಬೇಕು. ರಾಜ್ಯದ ಬೊಕ್ಕಸ ಆರ್ಥಿಕವಾಗಿ ಸಮೃದ್ಧವಾಗಿದೆ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಅವರು, ತಕ್ಷಣ ರೈತರ ಸಹಾಯಕ್ಕೆ ಧಾವಿಸಬೇಕು ಎಂದು ಒತ್ತಾಯಿಸಿದರು. ಮುಂದಿನ 10 ದಿನಗಳಲ್ಲಿ ನಮ್ಮ ವರದಿಯನ್ನು ಸರ್ಕಾರಕ್ಕೆ ಕೊಡುತ್ತೇವೆ. ಸರ್ಕಾರ ಕುಂಟು ನೆಪ ಹೇಳಬಾರದು ಎಂದರು.

ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಲಿಂಗರಾಜ ಪಾಟೀಲ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಬರ ಅಧ್ಯಯನ ತಂಡದಲ್ಲಿ ಇದ್ದರು.

ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಬಸವರಾಜ ಕುಂದಗೋಳಮಠ, ರಾಘವೇಂದ್ರ ಪಾಟೀಲ, ಷಣ್ಮುಖ ಗುರಿಕಾರ, ಈರಣ್ಣ ಜಡಿ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net