ಧಾರವಾಡ: ಧಾರವಾಡ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ರೈತರಿಗೆ ತುರ್ತು ಬೆಳೆ ಹಾನಿ ಪರಿಹಾರ ನೀಡಬೇಕು ಮತ್ತು ಸಾಮಾಜಿಕ ಭದ್ರತಾ ಪಿಂಚಣಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ನೇತೃತ್ವದಲ್ಲಿ ರೈತರು ಜಿಲ್ಲಾಽಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ತುಂಬಾ ಕಡಿಮೆ ಮಳೆಯಾಗಿದ್ದು, ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಕೆರೆ, ಕೊಳ್ಳಗಳು ಬತ್ತಿವೆ. ಬೋರ್‌ವೆಲ್‌ಗಳು ವಿಫಲವಾಗಿವೆ. ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಈಗಾಗಲೇ ಬಿತ್ತನೆ ಮಾಡಿದ ಬೆಳೆಗಳು ಸಂಪೂರ್ಣ ನಶಿಸುತ್ತಿವೆ. ಕೆಲಸವಿಲ್ಲದೇ ರೈತರು ಮತ್ತು ಕೃಷಿ ಕಾರ್ಮಿಕರು ಜೀವನೋಪಾಯಕ್ಕಾಗಿ ಇತರ ಜಿಲ್ಲೆಗಳು ಮತ್ತು ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ.
ಮುಖ್ಯಮಂತ್ರಿ ಅವರು ಸ್ಥಳಕ್ಕೆ ಉನ್ನತ ಮಟ್ಟದ ಅಧಿಕಾರಿಗಳ ತಂಡ ಕಳುಹಿಸಿ ಪರಿಶೀಲನೆ ಮಾಡಿ, ಯೋಗ್ಯ ಪರಿಹಾರ ನೀಡಬೇಕು. ಬರ ಸಂದರ್ಭದಲ್ಲಿ ಮನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ 200 ದಿನಗಳ ಕೆಲಸ ಹಾಗೂ ದಿನಕ್ಕೆ 600 ರೂ. ಕೂಲಿ ನೀಡಬೇಕು. ರಾಷ್ಟ್ರೀಯ ಬ್ಯಾಂಕ್, ಸಹಕಾರಿ ಬ್ಯಾಂಕ್ ಮತ್ತು ಖಾಸಗಿ ಸಾಲ ಸೇರಿ ರೈತರ ಎಲ್ಲ ಸಾಲ ಮನ್ನಾ ಮಾಡಬೇಕು ಒತ್ತಾಯಿಸಿದರು.
ನದಿಗಳಿಂದ ಕೆರೆಗಳಿಗೆ ನೀರನ್ನು ಹರಿಸಿ, ಅಂತರ್ಜಲ ಮಟ್ಟ ಹೆಚ್ಚಿಸಬೇಕು. ಬೆಳೆ ನಷ್ಟ ಪರಿಹಾರವನ್ನು ಪ್ರತಿ ಎಕರೆಗೆ 50 ಸಾವಿರ ರೂ. ಪರಿಹಾರ ನೀಡಬೇಕು. ಧಾರವಾಡ ಜಿಲ್ಲೆಗೆ ಮೋಡ ಬಿತ್ತನೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ, ಕಾರ್ಯದರ್ಶಿ ಶರಣು ಗೋನವಾರ ಹಾಗೂ ಮಂಜುನಾಥ ತಿಮ್ಮಾಪುರ, ಶಿವಲಿಂಗಪ್ಪ ಉಣಕಲ್, ಕಲ್ಲಪ್ಪ ಮೂಸಣ್ಣವರ, ದಿವಾನ್ ಸಾಬ್ ತುಮ್ಕಿ, ಉಳುವಪ್ಪ ಅಂಗಡಿ, ಗಂಗಪ್ಪ ಖಂಡೋಜಿ, ಹನುಮಮ್ಮ ಮಾದರ, ಗೌರಮ್ಮ ಇತರರಿದ್ದರು.