ಧಾರವಾಡ: ಶಿಕ್ಷಕರೊಬ್ಬರು ವಿದ್ಯಾರ್ಥಿಯಿಂದ 8 ತೊಲ ಚಿನ್ನಾಭರಣ ಪಡೆದ ಪ್ರಕರಣ ಸಂಬಂಧ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ಡಿಡಿಪಿಐ ನೋಟಿಸ್ ಜಾರಿ ಮಾಡಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗೂ ಮೊದಲೇ ಪ್ರಶ್ನೆಪತ್ರಿಕೆ ನೀಡುವ ಆಮಿಷವೊಡ್ಡಿದ್ದ ವಿದ್ಯಾರಣ್ಯ ಶಾಲೆಯ ಶಿಕ್ಷಕ ರಾಜಶೇಖರ ವಡತೇರ ಎಂಬುವರ ವಿರುದ್ಧ ವಿದ್ಯಾರ್ಥಿಯಿಂದ 8 ತೊಲ ಚಿನ್ನಾಭರಣ ಪಡೆದ ಆರೋಪ ಕೇಳಿಬಂದಿದೆ. ಪಾಲಕರ ಗಮನಕ್ಕೆ ಬಂದ ನಂತರ ಜೀವ ಬೆದರಿಕೆ ಹಾಕಿರುವ ಆರೋಪ ವ್ಯಕ್ತವಾಗಿದೆ. ಈ ಬಗ್ಗೆ ಎಚ್ಚೆತ್ತುಕೊಂಡಿರುವ ಡಿಡಿಪಿಐ ಎಸ್.ಎಸ್. ಕೆಳದಿಮಠ ಅವರು ಕೆ.ಇ. ಬೋರ್ಡ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದಾರೆ. ಅನುದಾನಿತ ಶಾಲೆಯಾಗಿದ್ದರಿಂದ ಸಂಸ್ಥೆಯವರು ಶಿಸ್ತು ಕ್ರಮ ಜರುಗಿಸಿ, ತಮಗೆ ವರದಿ ನೀಡಬೇಕು ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ.