ಮಾಂಜಾ ದಾರ ಮಾರಾಟ- ಬಳಕೆಗೆ ಕಡಿವಾಣ ಹಾಕಿ

ಶಾಸಕ ಪ್ರಸಾದ ಅಬ್ಬಯ್ಯ ಸೂಚನೆ
ಶಾಸಕ ಪ್ರಸಾದ ಅಬ್ಬಯ್ಯ .
ಶಾಸಕ ಪ್ರಸಾದ ಅಬ್ಬಯ್ಯ .
Published on: 

ಹುಬ್ಬಳ್ಳಿ: ಮಾಂಜಾ ದಾರದಿಂದಾಗಿ ಬೈಕ್​ ಸವಾರರು ಪ್ರಾಣ ಕಳೆದುಕೊಳ್ಳುತ್ತಿರುವ ಹಾಗೂ ಗಂಭೀರವಾಗಿ ಗಾಯಗೊಳ್ಳುತ್ತಿರುವ ಘಟನೆಗಳು ಆತಂಕ ಮೂಡಿಸಿವೆ. ಗಾಳಿಪಟ ಹಾರಿಸುವ ಸಂಭ್ರಮದಿಂದ ಯಾರೊಬ್ಬರ ಜೀವಕ್ಕೂ ಅಪಾಯವಾಗಬಾರದು. ಆದ್ದರಿಂದ ಅಪಾಯಕಾರಿ ದಾರದ ಮಾರಾಟ ಮತ್ತು ಬಳಕೆಯನ್ನು ತಡೆಗಟ್ಟಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಸೂಚಿಸಿದ್ದಾರೆ.

ಒಬ್ಬರ ನಿರ್ಲಕ್ಷ್ಯದಿಂದ ಒಂದು ಕುಟುಂಬ ತನ್ನ ಆಧಾರವನ್ನೇ ಕಳೆದುಕೊಳ್ಳಬಹುದು. ಹೀಗಾಗಿ ಗಾಳಿಪಟ ಹಾರಿಸುವ ಸಂಭ್ರಮ ಮತ್ತೊಬ್ಬರ ಬದುಕಿಗೆ ಕಂಟಕವಾಗದಂತೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು.

ಅಪಾಯಕಾರಿ ಮಾಂಜಾ ದಾರದ ಮಾರಾಟ, ದಾಸ್ತಾನು ಮತ್ತು ಬಳಕೆಯನ್ನು ತಡೆಯಲು ಪೊಲೀಸ್​ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮಾರುಕಟ್ಟೆಗಳಲ್ಲಿ ಪರಿಶೀಲನೆ ನಡೆಸಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಶಾಲಾ-ಕಾಲೇಜುಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದ್ದಾರೆ.

ಮಕ್ಕಳು ಮತ್ತು ಯುವಕರು ಗಾಳಿಪಟ ಹಾರಿಸುವಾಗ ಸುರಕ್ಷಿತ, ಪರಿಸರ ಸ್ನೇಹಿ ದಾರಗಳನ್ನು ಮಾತ್ರ ಬಳಸಬೇಕು. ರಸ್ತೆ, ವಿದ್ಯುತ್​ ತಂತಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಗಾಳಿಪಟ ಹಾರಿಸುವುದನ್ನು ತಪ್ಪಿಸಬೇಕು. ಪೋಷಕರು ಕೂಡ ಮಕ್ಕಳಿಗೆ ಸುರಕ್ಷತೆಯ ಮಹತ್ವ ತಿಳಿಸಬೇಕು ಎಂದು ತಿಳಿಸಿದ್ದಾರೆ.

ಸಂಭ್ರಮಕ್ಕಿಂತ ಜೀವ ದೊಡ್ಡದು. ಮನರಂಜನೆಗಿಂತ ಮಾನವೀಯತೆ ಮುಖ್ಯ. ಮಾಂಜಾ ದಾರದಿಂದ ಮತ್ತೊಂದು ಅಮಾಯಕ ಜೀವ ಬಲಿಯಾಗದಂತೆ ಅಧಿಕಾರಿಗಳು, ಪೊಲೀಸ್​ ಇಲಾಖೆ, ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net