ಆದರೆ, ಈ ಮಧ್ಯೆ ಮಳೆ ಕೈಕೊಟ್ಟಿರುವುದರಿಂದ ಧಾರವಾಡ ಜಿಲ್ಲೆಯ ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಆಕಾಶಕ್ಕೆ ಮುಖ ಮಾಡಿ "ವರುಣದೇವ ಕಾಪಾಡಪ್ಪ' ಎಂದು ಬೇಡಿಕೊಳ್ಳುತ್ತಿದ್ದಾರೆ.
ಮೇ ಕೊನೇ ವಾರದಲ್ಲಿ ಬಿತ್ತನೆ ಆರಂಭಿಸಿದ್ದರಿಂದ ಈಗಾಗಲೇ ಬೆಳೆಗಳು ಒಂದು ಅಡಿಯಷ್ಟು ಬೆಳೆದು ನಿಂತಿವೆ. ಮಧ್ಯಾಹ್ನ ಬಿಸಿಲು ಏರುತ್ತಿದ್ದಂತೆ ಒಣಗಿ ನೆಲಕ್ಕೆ ಬೀಳುತ್ತಿವೆ.
ಇದೀಗ ಮಳೆ ಹೋಗಿರುವುದರಿಂದ ಬೆಳೆಗಳು ಒಣಗಲು ಆರಂಭಿಸಿವೆ. ಕ್ರಿಮಿ ಕೀಟಗಳ ಆತಂಕವೂ ಎದುರಾಗಿದೆ. ಒಣಬೇಸಾಯ ನಂಬಿರುವ ರೈತರು ಯಾವುದೇ ಜಲಮೂಲ ಇಲ್ಲದೇ ಮುಖ ಸಪ್ಪೆ ಮಾಡಿಕೊಂಡು ಕುಳಿತಿದ್ದಾರೆ.
ಬೋರ್ವೆಲ್, ಬಾವಿ ಇರುವ ರೈತರು ಪಂಪ್ಸೆಟ್ ಮೂಲಕ ಒಂದಿಷ್ಟು ನೀರು ಸಿಂಪಡಿಸುವ ಕೆಲಸ ಮಾಡುತ್ತಿದ್ದಾರೆ. ನೀರಾವರಿ ಸೌಲಭ್ಯ ಇದ್ದವರು ಹೇಗೋ ಬೆಳೆಗಳನ್ನು ಉಳಿಸಿಕೊಳ್ಳುತ್ತಾರೆ, ನಾವೇನು ಮಾಡುವುದು ಎಂದು ಬಹಳಷ್ಟು ರೈತರು ಚಿಂತಿತರಾಗಿದ್ದಾರೆ.
ಗ್ರಾಮೀಣ ತಾಲೂಕು, ಕೆಲವು ತಾಲೂಕುಗಳಲ್ಲಿ ನಿರಂತರ ವಿದ್ಯುತ್ ಸಿಗದೇ ನೀರಿದ್ದರೂ ಬೆಳೆಗಳಿಗೆ ಉಣಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಛಬ್ಬಿ ಹೋಬಳಿಯ ರೈತರು ಹೆಸ್ಕಾಂ ಅಧಿಕಾರಿಗಳಿಗೆ ಭೇಟಿ ಮಾಡಿ ನಿರಂತರ ವಿದ್ಯುತ್ ನೀಡುವಂತೆ ಮನವಿ ಮಾಡಿದ್ದಾರೆ.
ಈ ಎಲ್ಲದರ ಮಧ್ಯೆ ದೇವರೇ ನಮ್ಮನ್ನು ಕಾಪಾಡಬೇಕು ಎಂದು ಊರಿನ ದೇವಸ್ಥಾನಗಳಲ್ಲಿ ಪೂಜೆ, ವಿಧಿ ವಿಧಾನಗಳಲ್ಲಿ ತೊಡಗಿದ್ದಾರೆ. ಈಗಾಗಲೇ ಕೆಲ ಗ್ರಾಮಗಳಲ್ಲಿ ಕಪ್ಪೆ ಮದುವೆ, ಕತ್ತೆ ಮದುವೆ ಮಾಡುವ ಮೂಲಕ ವರುಣನನ್ನು ಒಲಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ.
ಕಪ್ಪೆ ಮದುವೆ ಮಾಡಿದರೆ ಮಳೆಯಾಗುತ್ತದೆ ಎಂಬುದು ಗ್ರಾಮೀಣರ ನಂಬಿಕೆ. ಹಾಗಾಗಿ ಇಂತಹ ಆಚರಣೆಗಳ ಮೂಲಕ ದೇವರ ಮೊರೆ ಹೋಗುತ್ತಿದ್ದಾರೆ.
ಮಳೆ ಪ್ರಮಾಣ
ಮೇ ತಿಂಗಳಲ್ಲಿ ವಾಡಿಕೆಗಿಂತ ಅತಿ ಹೆಚ್ಚು ಮಳೆಯಾಗಿದೆ. ಆದರೆ, ಜೂನ್ ತಿಂಗಳಲ್ಲಿ ಆಗಬೇಕಾದ ಮಳೆ ಆಗುತ್ತಿಲ್ಲ. ಮುಂಗಾರು ಪೂರ್ವ ಮಳೆ ಆರ್ಭಟ ನೋಡಿ ಬಿತ್ತನೆ ಮಾಡಲಾಗಿದೆ. ಜಮೀನಿನಲ್ಲಿ ತೇವಾಂಶ ಬಹಳಷ್ಟು ಇರುವುದರಿಂದ ಸದ್ಯಕ್ಕೆ ಹುಬ್ಬಳ್ಳಿ ತಾಲೂಕಿನಲ್ಲಿ ಬೆಳೆಗಳಿಗೆ ತೊಂದರೆ ಇಲ್ಲ.
ಆದರೆ, ಇನ್ನೊಂದು ವಾರ ಇದೇ ರೀತಿ ಒಣ ಹವೆ ಮುಂದುವರೆದರೆ ಬೆಳವಣಿಗೆ ಕುಂಠಿತವಾಗಿ ಬಿತ್ತಿದಷ್ಟು ದವಸ ಧಾನ್ಯಗಳು ಸಿಗದಂತಹ ಸ್ಥಿತಿ ಬರುತ್ತದೆ ಎಂದು ರೈತ ಮುಖಂಡರು ಹೇಳುತ್ತಾರೆ.
"
ಮುಂಗಾರು ಮಳೆಯ ಕಣ್ಣಾಮುಚ್ಚಾಲೆ ಆಟ ಮುಂದುವರಿದಿದೆ. ಅರಬ್ಬಿ ಸಮುದ್ರದಿಂದ ಬರುವ ಮೋಡಗಳಲ್ಲಿ ಬದಲಾವಣೆ ಕಂಡಿಲ್ಲ. ಹೊಸ ಮೋಡಗಳೂ ಕಾಣುತ್ತಿಲ್ಲ. ನೀರಿನ ಮೂಲಗಳಿದ್ದರೆ ಈಗಾಗಲೇ ಬಿತ್ತಿದ ಬೆಳೆಗೆ ನೀರು ಕೊಡುವುದು ಉತ್ತಮ. ರೈತರು ಈಗ ಬಿತ್ತನೆ ಮಾಡಬಾರದು.
— ಡಾ. ರವಿ ಪಾಟೀಲ, ನೋಡಲ್ ವಿಜ್ಞಾನಿ, ಕೃಷಿ ವಿವಿ ಧಾರವಾಡ