

ಹುಬ್ಬಳ್ಳಿ : ಚುನಾವಣೆಯಲ್ಲಿ ಸೋತಾಗಲೆಲ್ಲ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆಯೆಂದು ಬೀದಿಗಿಳಿದು ಅರಾಜಕತೆ ಸೃಷ್ಟಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಮಾಡುತ್ತಿದ್ದಾರೆ. ಈ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಬಿಜೆಪಿ ವತಿಯಿಂದ ದೇಶದಾದ್ಯಂತ ನಡೆಯುತ್ತಿರುವ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ’ ಆಂದೋಲನವನ್ನು ಕರ್ನಾಟಕದಲ್ಲಿಯೂ ಆರಂಭಿಸಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ತಿಳಿಸಿದರು.
ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 4ರಂದು ಹಾವೇರಿಯಲ್ಲಿ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ’ ಆಂದೋಲನ ಆಯೋಜಿಸಲಾಗಿದೆ. ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಇತರರು ಭಾಗವಹಿಸುವರು ಎಂದರು.
ದೇಶದಾದ್ಯಂತ ಹಲವಾರು ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಆದರೂ, ಜನರ ತೀರ್ಪು ಒಪ್ಪುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ ಎಂದು ಟೀಕಿಸಿದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ಚುನಾವಣೆ ಎದುರಿಸುವವರೆಗೂ ಕಾಂಗ್ರೆಸ್ಗೆ ಸೋಲು ತಪ್ಪಿದ್ದಲ್ಲ. ರಾಹುಲ್ ಗಾಂಧಿ ಅವರನ್ನು ದೇಶದ ಜನರು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ಗೆ ಗೆಲುವು ಬೇಕಾದರೆ ಪರ್ಯಾಯ ನಾಯಕತ್ವ ಹುಡುಕಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ, ಕೇರಳ, ತೆಲಂಗಾಣ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಈ ರಾಜ್ಯಗಳಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಇವಿಎಂ ಬಗ್ಗೆ ಮಾತನಾಡುವುದಿಲ್ಲ. ಆದರೆ, ಚುನಾವಣೆಗಳಲ್ಲಿ ಸೋಲಾದಾಗ ಮಾತ್ರ ಆ ಪಕ್ಷದ ಮುಖಂಡರಿಗೆ ಇವಿಎಂನಲ್ಲಿ ದೋಷ ಕಾಣಿಸುತ್ತದೆ ಎಂದು ವ್ಯಂಗ್ಯವಾಡಿದರು.
ಎಸ್ಐಆರ್ ಮುಂಚೆಯೂ ಕಾಂಗ್ರೆಸ್ ಚುನಾವಣೆಗಳಲ್ಲಿ ಸೋಲುತ್ತ ಬಂದಿದೆ. ತನ್ನ ಸೋಲನ್ನು ಚುನಾವಣೆ ಆಯೋಗ, ಇವಿಎಂ ಮಷಿನ್, ಎಸ್ಐಆರ್ ಮೇಲೆ ಹಾಕುವುದು ಕಾಂಗ್ರೆಸ್ನ ಚಾಳಿಯಾಗಿದೆ. ಇವಿಎಂ ಬಗ್ಗೆ ಮಾತನಾಡುವ ಕಾಂಗ್ರೆಸ್, ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಉಪಯೋಗಿಸಿದರೂ ಗೆಲ್ಲಲಾಗಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ವಿಸರ್ಜಿಸುವ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಧೈರ್ಯ ಇದ್ದರೆ ಕಾಂಗ್ರೆಸ್ ಇರುವ ರಾಜ್ಯಗಳಲ್ಲಿನ ಸರ್ಕಾರಗಳನ್ನು ವಿಸರ್ಜಿಸಿ, ಮತ್ತೊಮ್ಮೆ ಚುನಾವಣೆ ಎದುರಿಸಲಿ. ಈಗಿನ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದರೆ ಬಿಜೆಪಿ 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯ ಗಳಿಸುತ್ತದೆ ಎಂದರು.
ಬೆಲೆ ಏರಿಕೆ ಮಾಡುವುದಿಲ್ಲ : ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಆರ್. ಅಶೋಕ ಹೇಳಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ 3 ಬಾರಿ ಹಾಲಿನ ದರ ಏರಿಕೆ ಮಾಡಲಾಗಿತ್ತು. ಸಿಎಂ ಡಿ.ಕೆ. ಶಿವಕುಮಾರ ಮತ್ತೆ ಹಾಲಿನ ದರ ಏರಿಕೆ ಮಾಡಿದ್ದಾರೆ. ಈ ಸರ್ಕಾರದಲ್ಲಿ ನಿತ್ಯೋಪಯೋಗಿ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು, ಆಡಳಿತ ನಡೆಸುವ ಅಧಿಕಾರವನ್ನು ಡಿ.ಕೆ. ಶಿವಕುಮಾರ ಕಳೆದುಕೊಂಡಿದ್ದಾರೆ ಎಂದರು.
ರಾಜ್ಯದಲ್ಲಿ ಬರಗಾಲ ತಲೆದೋರಿದೆ. ಈ ಹಿಂದೆ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಇದ್ದಾಗಲೂ ಬರಗಾಲ ಹಾಗೂ ಪ್ರವಾಹ ಎರಡೂ ತಲೆದೋರಿತ್ತು. ಆ ಸಮಯದಲ್ಲಿ ನಾನೇ ಕಂದಾಯ ಸಚಿವನಾಗಿದ್ದೆ. ಆಗ ನಾನು ಮಾಡಿದ್ದ ಕಾರ್ಯಗಳನ್ನು ಕಾಂಗ್ರೆಸ್ ಮಾಡಿದರೆ ಸಾಕು. ಈ ಹಿಂದೆ ಬರಗಾಲ ಆವರಿಸಿದ್ದಾಗ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡದೆ, ರೈತರಿಗೆ ನೇರವಾಗಿ ಪರಿಹಾರ ನೀಡಿದ್ದೆವು ಎಂದು ಹೇಳಿದರು.
ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ರಾಜ್ಯಸಭೆ ಸದಸ್ಯ ಎಂ. ನಾಗರಾಜ, ಎಂಎಲ್ಸಿ ಲಿಂಗರಾಜ ಪಾಟೀಲ, ಮಾಜಿ ಸಚಿವ ಕೆ.ಎನ್. ಗಡ್ಡಿ, ಜಯತೀರ್ಥ ಕಟ್ಟಿ, ತಿಪ್ಪಣ್ಣ ಮಜ್ಜಗಿ ಸುದ್ದಿಗೋಷ್ಠಿಯಲ್ಲಿ ಇದ್ದರು.