ಗೊಬ್ಬರ ಮಾರಾಟದಲ್ಲಿ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ crore
crore ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಧಾನ ಕಾರ್ಯದಶಿರ್ ರುಪತಿ ಭಟ್.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್ ಆರೋಪ
ಎಂಆರ್ಪಿ ದರಕ್ಕಿಂತಲೂ ಹೆಚ್ಚಿನ ಬೆಲೆಗೆ ಮಾರಾಟ
ಉದ್ದೇಶಪೂರಕ ಕೊರತೆ ಸೃಷ್ಟಿ ಮಾಡಿರುವ ಸಾಧ್ಯತೆ
ಹುಬ್ಬಳ್ಳಿ :
crore ಯೂರಿಯಾ ಹಾಗೂ ಡಿಎಪಿ ಗೊಬ್ಬರ ಮಾರಾಟದಲ್ಲಿ ರಾಜ್ಯದಲ್ಲಿ ಸುಮಾರು 2 ಸಾವಿರ ಕೋಟಿ ರೂ.ಗಳಷ್ಟು ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ಗೊಬ್ಬರ ತಯಾರಿಸುವ ಕಂಪನಿಗಳು ಹಾಗೂ ರಿಟೇಲ್ ಅಂಗಡಿಗಳು ಶಾಮೀಲಾಗಿವೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಸಬ್ಸಿಡಿ ವ್ಯಾಪ್ತಿಗೆ ಒಳಪಡುವ ಯೂರಿಯಾ ಹಾಗೂ ಡಿಎಪಿ ರಸಗೊಬ್ಬರಗಳನ್ನು ಎಂಆರ್ಪಿ ದರಕ್ಕಿಂತಲೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ವಿರೋಧ ವ್ಯಕ್ತಪಡಿಸುವ ರೈತರಿಗೆ ಗೊಬ್ಬರ ನೀಡುವುದಿಲ್ಲ ಎಂಬ ಬೆದರಿಕೆಯನ್ನು ಗೊಬ್ಬರ ವ್ಯಾಪಾರಸ್ಥರು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
45 ಕೆಜಿ ತೂಕದ ಯೂರಿಯಾ ರಸಗೊಬ್ಬರದ ಚೀಲದ ದರ 266.50 ರೂ. ಇದ್ದರೂ, 320 ರಿಂದ 600 ರೂ.ವರೆಗೂ ಮಾರಾಟವಾಗುತ್ತಿದೆ.
ಡಿಎಪಿ ಗೊಬ್ಬರದ ಪ್ರತಿ 50 ಕೆಜಿ ತೂಕದ ಚೀಲದ ಗರಿಷ್ಠ ದರ 1,350 ರೂ. ಇದ್ದರೂ, 1,450 ರಿಂದ 2,100 ರೂ.ವರೆಗೆ ಮಾರಾಟವಾಗುತ್ತಿದೆ ಎಂದು ದೂರಿದರು.
ಕರ್ನಾಟಕದಲ್ಲಿ 18.2 ಲಕ್ಷ ಮೆಟ್ರಿಕ್ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಇದ್ದು, 21 ಲಕ್ಷ ಟನ್ ದಾಸ್ತಾನು ಇದೆ ಹಾಗೂ ಡಿಎಪಿ ರಸಗೊಬ್ಬರವು ಸಹ ಬೇಡಿಕೆಗಿಂತ ದಾಸ್ತಾನು ಹೆಚ್ಚು ಇದೆಯೆಂದು ಕೇಂದ್ರ ಸಚಿವರು ಇತ್ತೀಚೆಗಷ್ಟೇ ಉತ್ತರಿಸಿದ್ದಾರೆ.
ಆದರೂ, ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಕಾಣುತ್ತಿದ್ದು, ಉದ್ದೇಶಪೂರಕ ಕೊರತೆ ಸೃಷ್ಟಿ ಮಾಡಿರುವ ಸಾಧ್ಯತೆ ಇದೆ ಎಂದರು.
ಈ ಬಗ್ಗೆ ಕೃಷಿ ಇಲಾಖೆ ಆಯುಕ್ತರು ಹಾಗೂ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರದ ಮೂಲಕ ದೂರು ನೀಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
ಗೊಬ್ಬರ ಉತ್ಪಾದಿಸುವ ಕಂಪನಿಗಳು ರಿಟೇಲ್ ಅಂಗಡಿಗಳವರೆಗೆ ಸಾಗಾಟದ ವೆಚ್ಚ ಭರಿಸಬೇಕು. ಆದರೆ, ರೈಲ್ವೆ ಗೂಡ್ಸ್ಶೆಡ್ವರೆಗೆ ಮಾತ್ರ ಸಾಗಾಟದ ವೆಚ್ಚವನ್ನು ಕಂಪನಿಗಳು ಭರಿಸುತ್ತಿವೆ.
ರೈಲ್ವೆ ಗೂಡ್ಸ್ಶೆಡ್ನಿಂದ ರಿಟೇಲ್ ಅಂಗಡಿವರೆಗಿನ ಸಾಗಾಟದ ವೆಚ್ಚವನ್ನು ರಿಟೇಲ್ ವ್ಯಾಪಾರಸ್ಥರೇ ಭರಿಸುತ್ತಿದ್ದು, ಆ ವೆಚ್ಚವನ್ನು ವ್ಯಾಪಾರಸ್ಥರು ರೈತರಿಂದ ಆಕರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೊಬ್ಬರ ಖರೀದಿಗೆ ಅಂಗಡಿಗಳಿಗೆ ಹೋಗುವ ರೈತರಿಗೆ ರಿಟೇಲ್ ವ್ಯಾಪಾರಸ್ಥರು ಮತ್ತೊಂದಿಷ್ಟು ಉತ್ಪನ್ನಗಳನ್ನು ಖರೀದಿಸುವಂತೆ ಒತ್ತಡ ಹೇರುತ್ತಿದ್ದು, ಹೆಚ್ಚುವರಿ ಉತ್ಪನ್ನ ಖರೀದಿಸಿದರೆ ಮಾತ್ರ ಗೊಬ್ಬರ ನೀಡುವ ಬೆದರಿಕೆ ಹಾಕುತ್ತಿದ್ದಾರೆ.
ಗೊಬ್ಬರ ವ್ಯಾಪಾರಸ್ಥರ ಕಿರುಕುಳ ಹಾಗೂ ಕೃಷಿ ಇಲಾಖೆಯ ಬೇಜವಾಬ್ದಾರಿತನದ ವಿರುದ್ಧ ತಾಲೂಕು ಮಟ್ಟದಲ್ಲಿ ಅಭಿಯಾನ ನಡೆಸಲಾಗುತ್ತಿದೆ. ರಸಗೊಬ್ಬರವನ್ನು ಸರಿಯಾದ ಬೆಲೆಗೆ ಮಾರಾಟ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಿವು ಜಿ.ಎಂ. ದಾದಾಪೀರ ಧಾರವಾಡ, ಅರುಣಕುಮಾರ ಪಾಟೀಲ ಸುದ್ದಿಗೋಷ್ಠಿಯಲ್ಲಿ ಇದ್ದರು.