ರಾಜ್ಯ ಕಾಂಟ್ರಾಕ್ಟರ್ ಅಸೋಸಿಯೇಶನ್ ಅಧ್ಯಕ್ಷ ಮಂಜುನಾಥ ಹೇಳಿಕೆ
1.50 ಲಕ್ಷ ಬಡ, ಮಧ್ಯಮ ಗುತ್ತಿಗೆದಾರರ ಸಂಕಟ ಸರ್ಕಾರ ಏಕೆ ಕೇಳುತ್ತಿಲ್ಲ
ಹುಬ್ಬಳ್ಳಿ: contractors ಕಳೆದ ಎರಡೂವರೇ ವರ್ಷದಿಂದ ಒಂದು ರೂಪಾಯಿ ಲಾಭ ಆಗಿಲ್ಲ, ಸಾಲ ಸೋಲ ಮಾಡಿ ಟೆಂಡರ್ನಲ್ಲಿ ಪಾಲ್ಗೊಂಡು ಕಾಮಗಾರಿ ನಡೆಸಿ ಇದೀಗ ವಿಷ ಕುಡಿಯುವ ಪರಿಸ್ಥಿತಿ ಬಂದಿದೆ. ಹೀಗಾಗಿ ಬಾಕಿ ಬಿಲ್ 37 ಸಾವಿರ ಕೋಟಿ ರೂ. ಬಿಡುಗಡೆಗೆ ಆಗ್ರಹಿಸಿ ಮಾರ್ಚ್ 6ರಂದು ಬೆಂಗಳೂರಿನಲ್ಲಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಮಾ. 5ರಂದು ಧರಣಿಗೆ ನಿರ್ಧರಿಸಲಾಗಿತ್ತು. ಪೊಲೀಸ್ ಅನುಮತಿ ಇತ್ಯಾದಿ ಕಾರಣಕ್ಕೆ ಒಂದು ದಿನ ಮುಂದೂಡಲಾಗಿದೆ. ಅಂದು ರಾಜ್ಯಾದ್ಯಂತ ಸುಮಾರು 30 ಸಾವಿರ ಗುತ್ತಿಗೆದಾರರು ಸೇರಿ ಪ್ರತಿಭಟನೆ ನಡೆಸುತ್ತೇವೆ. ಇದಕ್ಕೆ ಸರ್ಕಾರ ಸ್ಪಂದಿಸದೇ ಇದ್ದರೆ ಏಪ್ರಿಲ್ನಲ್ಲಿ ಅನಿರ್ದಿಷ್ಟ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗುವುದು ಎಂದರು.
ಪ್ರಮುಖವಾಗಿ ನಗರಾಭಿವೃದ್ಧಿ, ವಸತಿ, ವಕ್ಪ ಇಲಾಖೆ ಸೇರಿದಂತೆ ಕೆಲವು ಇಲಾಖೆಗಳು ಮಧ್ಯವರ್ತಿಗಳ ಮೂಲಕ ಅಧಿಕಾರ ನಡೆಸುತ್ತಿವೆ. ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ, ಡಿಸಿಎಂ ಡಿ.ಕೆ. ಶಿವಕುಮಾರ ಅವರು ನಮ್ಮ ಸಮಸ್ಯೆಗೆ ಒಂದಿಷ್ಟು ಸ್ಪಂದಿಸಿದ್ದಾರೆ. ಅವರಿಗೆ ನಮ್ಮ ಬೇಡಿಕೆಗಳನ್ನು ಸಲ್ಲಿಸಿದ್ದೇವೆ ಎಂದರು.
ಲೋಕೋಪಯೋಗಿ ಇಲಾಖೆಯ 8300 ಕೋಟಿ ರೂ. ಜಲ ಸಂಪನ್ಮೂಲ 13000 ಕೋಟಿ, ಗ್ರಾಮೀಣಾಭಿವೃದ್ಧಿ 3800 ಕೋಟಿ, ನಗರಾಭಿವೃದ್ಧಿ ಇಲಾಖೆ 2000 ಕೋಟಿ, ವಸತಿ ಮತ್ತು ವಕ್ಪ ಇಲಾಖೆ 2800 ಕೋಟಿ, ಬಿಬಿಎಂಪಿ 1600 ಕೋಟಿ ರೂಪಾಯಿ ಬಿಲ್ ಬಾಕಿ ಉಳಿದಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುಂಚೆ ಗುತ್ತಿಗೆದಾರರಿಂದ ಯಾವುದೇ ಕಮಿಷನ್ ತೆಗೆದುಕೊಳ್ಳುವುದಿಲ್ಲ. ನಿಮ್ಮ ಬಿಲ್ ಪಾವತಿಸುತ್ತೇವೆ ಎಂದು ಸ್ವತಃ ಸಿದ್ದರಾಮಯ್ಯ ಅವರು ಹೇಳಿದ್ದರು. ಆದರೆ, ಕಳೆದ ಸರ್ಕಾರಕ್ಕಿಂತ ಹಣ ಬಿಡುಗಡೆ ವಿಚಾರದಲ್ಲಿ ಹೆಚ್ಚಿನ ಕಮಿಷನ್ ನೀಡಬೇಕಾಗಿ ಬಂದಿರುವುದು ದುರ್ದೈವದ ಸಂಗತಿ ಎಂದು ಬೇಸರಿಸಿದರು.
ಪ್ಯಾಕೇಜ್ ಟೆಂಡರ್ಗಳಿಗೆ ಹೊರ ರಾಜ್ಯದವರಿಗೆ ಮಣೆ ಹಾಕಲಾಗುತ್ತಿದೆ. ಕಮಿಷನ್ ಜಾಸ್ತಿ ಇರುವುದೇ ಇದಕ್ಕೆ ಕಾರಣ ಇರಬಹುದು. ಹಣ ಬಿಡುಗಡೆ ವಿಳಂಬವಾಗುವ ಟೆಂಡರ್ಗಳನ್ನು ಮಾತ್ರ ನಮಗೆ ನೀಡಲಾಗುತ್ತಿದೆ. ಇದು ನಿಲ್ಲಬೇಕು ಎಂದು ಆಗ್ರಹಿಸಿದರು.
ರಾಜ್ಯದ ಹಲವು ಕಡೆಗಳಲ್ಲಿ ಕಾಮಗಾರಿ ಆರಂಭಕ್ಕೆ ಪೂಜೆ ನೆಪದಲ್ಲಿ ಕೆಲ ಶಾಸಕರು ಆರು ತಿಂಗಳು ವರ್ಷಗಟ್ಟಲೇ ಕಾಯಿಸುತ್ತಾರೆ. ಇದರಿಂದ ಉಂಟಾಗುವ ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರನ್ನೇ ಹೊಣೆ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.