ವಿನಯ ಕುಲಕರ್ಣಿ ವಿರುದ್ಧ ಷಡ್ಯಂತ್ರ ನಡೆದಿದೆ ಆರೋಪಿಸಿ ಮೌನ ಮೆರವಣಿಗೆ

ವಿನಯ ಕುಲಕರ್ಣಿ ವಿರುದ್ಧ ಷಡ್ಯಂತ್ರ ನಡೆದಿದೆ
ವಿನಯ ಕುಲಕರ್ಣಿ ವಿರುದ್ಧ ಷಡ್ಯಂತ್ರ ನಡೆದಿದೆ
Published on
ಧಾರವಾಡ: ಶಾಸಕ ವಿನಯ ಕುಲಕರ್ಣಿ ಅವರ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿ ವಿನಯ ಕುಲಕರ್ಣಿ ಅಭಿಮಾನಿ ಬಳಗ ಹಾಗೂ ಹು-ಧಾ ಮಹಾನಗರ ಜಿಲ್ಲಾ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಮೌನ ಮೆರವಣಿಗೆ ನಡೆಯಿತು.
ನಗರದ ಕಲಾಭವನ ಮೈದಾನದಿಂದ ಕೆಸಿಸಿ ಬ್ಯಾಂಕ್ ವೃತ್ತದವರೆಗೆ ಮೌನ ಮೆರವಣಿಗೆ ಸಾಗಿತು. ತೋಳಿಗೆ, ಹಣೆಗೆ ಕಪ್ಪುಪಟ್ಟಿ ಕಟ್ಟಿದ್ದರು. `ಸತ್ಯ ಮೇವ ಜಯತೆ', `ಕಾಣದ ಕೈಗಳ ಹೆಸರು ಬಯಲಾಗಲಿ' ಎಂಬಿತ್ಯಾದಿ ಭಿತ್ತಿ-ಫಲಕಗಳನ್ನು ಕೈಯಲ್ಲಿ ಹಿಡಿದು ನಡೆದರು.
ಕೆಸಿಸಿ ವೃತ್ತದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಮೋಹನ ಲಿಂಬಿಕಾಯಿ ಮಾತನಾಡಿ, ವಿನಯ ಕುಲಕರ್ಣಿ ವಿರುದ್ಧ ಷಡ್ಯಂತ್ರ ನಡೆದಿದೆ. ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ. ವಿನಯ ಕುಲಕರ್ಣಿ ಅವರು ನಿರಪರಾದಿಯಾಗಿ ಬರುತ್ತಾರೆ. ಅವರ ಕುಟುಂಬದೊಂದಿಗೆ ಇದ್ದು, ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಮಾತನಾಡಿ, ವಿನಯ ಕುಲಕರ್ಣಿ ಅವರ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ಹೀಗಾಗಿ ಮೌನ ಮೆರವಣಿಗೆ ನಡೆಸಲಾಗಿದೆ. ನ್ಯಾಯಾಂಗದ ಮೇಲೆ ವಿಶ್ವಾಸವಿದೆ. ಮೇಲ್ಮನವಿ ಸಲ್ಲಿಸುತ್ತೇವೆ. ಮುಂಬರುವ ದಿನಗಳಲ್ಲಿ ವಿನಯ ಕುಲಕರ್ಣಿ ಅವರು ನಿರಪರಾದಿಯಾಗಿ ಹೊರ ಬಂದು, ಮತ್ತೆ ಕಾಂಗ್ರೆಸ್ ಕಟ್ಟುತ್ತಾರೆ. ಅವರ ಕುಟುಂಬದೊಂದಿಗೆ ನಾವಿದ್ದೇವೆ ಎಂದರು.
ಅರವಿಂದ ಏಗನಗೌಡರ ಮಾತನಾಡಿ, ಕುತಂತ್ರಿಗಳಿಗೆ ಎಚ್ಚರಿಕೆ ಕೊಡುವುದಕ್ಕೆ ಸ್ವಯಂ ಪ್ರೇರಿತವಾಗಿ ಅಭಿಮಾನಿಗಳು ಬಂದು ಮೌನ ಮೆರವಣಿಗೆಯಲ್ಲಿ ಭಾಗವಹಿಸಿದ್ದೀರಿ. ಒಬ್ಬ ವ್ಯಕ್ತಿಯ ತೇಜೋವಧೆ ಮಾಡುವುದಕ್ಕೆ ಪ್ರಯತ್ನಿಸುವವರಿಗೆ ಇದು ಎಚ್ಚರಿಕೆ ನೀಡಿದಂತಾಗಿದೆ ಎಂದರು.
ಮೌನ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮದ ವೇಳೆ ಕಾರ್ಯಕರ್ತರು ಘೋಷಣೆಗಳನ್ನು ಕೂಗುವುದಕ್ಕೆ ಮುಂದಾಗುತ್ತಿದ್ದಾಗ, ಘೋಷಣೆ ಕೂಗದಂತೆ ಮುಖಂಡರು ಆಗಾಗ ತಾಕೀತು ಮಾಡುತ್ತಿದ್ದರು. ಮೆರವಣಿಗೆ ಮೌನವಾಗಿ ನಡೆದು ಮುಕ್ತಾಯಗೊಂಡಿತು.
ಕಾಂಗ್ರೆಸ್ ಮುಖಂಡರಾದ ಅನಿಲಕುಮಾರ್ ಪಾಟೀಲ, ಎಂ.ಎಸ್. ಅಕ್ಕಿ, ಅಲ್ತಾಫ್ ಹಳ್ಳೂರ, ಈಶ್ವರ ಶಿವಳ್ಳಿ, ಪರಮೇಶ್ವರ ಕಾಳೆ, ಸದಾನಂದ ಡಂಗನವರ, ಆನಂದ ಸಿಂಗನಾಥ, ಮನೋಜ ಕರ್ಜಗಿ, ಗೌರಮ್ಮ ಬಲೋಗಿ, ಸುವರ್ಣಾ ಕಲ್ಲಕುಂಟ್ಲ ಇತರರಿದ್ದರು. ಮೌನ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net