ವಿಭಾಗ ಮಟ್ಟದ ಉದ್ಯೋಗ ಮೇಳಕ್ಕೆ ತೀರ್ಮಾನ

ಜಿಲ್ಲಾ ಕೌಶಲ ಪ್ರಗತಿ ಪರಿಶೀಲನಾ ಸಭೆ
ಜಿಲ್ಲಾ ಕೌಶಲ ಪ್ರಗತಿ ಪರಿಶೀಲನಾ ಸಭೆ
Published on
ಧಾರವಾಡ: ಬೆಳಗಾವಿ ವಿಭಾಗ ಮಟ್ಟದ ಉದ್ಯೋಗ ಮೇಳ ಆಯೋಜನೆ ಮಾಡುವ ಕುರಿತು ಚರ್ಚೆ ಮಾಡಲಾಗುವುದು. ಅಽಕಾರಿಗಳು ಅವಶ್ಯಕ ಮಾಹಿತಿ ನೀಡಿದರೆ ಶೀಘ್ರದಲ್ಲೇ ಉದ್ಯೋಗ ಮೇಳ ಆಯೋಜಿಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಂಗಣದಲ್ಲಿ ಜಿಲ್ಲಾ ಕೌಶಲ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹುಬ್ಬಳ್ಳಿ ಧಾರವಾಡ ನಗರಗಳು ಕೈಗಾರಿಕಾ ಮತ್ತು ವಿದ್ಯಾ ಕೇಂದ್ರಗಳಾಗಿವೆ. ಬಹಳಷ್ಟು ಕೈಗಾರಿಕೆಗಳು ಹುಬ್ಬಳ್ಳಿ ಧಾರವಾಡಗಳಲ್ಲಿವೆ. ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದು ಬಹಳ ಮುಖ್ಯವಾಗಿದೆ. ಅರ್ಹ ಅಭ್ಯರ್ಥಿಗಳು ಕೆಲಸ ಸಿಗದೇ ನಿರಾಶರಾಗಬಾರದು. ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ಉದ್ಯೋಗಾಧಾರಿತ ಕೌಶಲ ತರಬೇತಿ ನೀಡಬೇಕು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಕೈಗಾರಿಕೋದ್ಯಮಿಗಳ ಸಭೆ ಜರುಗಿಸಲಾಗುವುದು. ಕೈಗಾರಿಕೆಗಳಲ್ಲಿ ಅವಶ್ಯ ಕೌಶಲಗಳನ್ನು ಅಭ್ಯರ್ಥಿಗಳಿಗೆ ತರಬೇತಿ ನೀಡಲು ಕ್ರಮ ವಹಿಸಬೇಕು. ಐಟಿಐ ವಿದ್ಯಾರ್ಹತೆ ಹೊಂದಿದವರಿಗೆ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯುತ್ತಿವೆ. ಪದವೀಧರರಿಗೂ ಸಹ ಉದ್ಯೋಗಗಳು ದೊರೆಯುವಂತಾಗಬೇಕು. ಫ್ಯೂಚರ್ ಸ್ಕಿಲ್ ಯೋಜನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಬೇಕಿದೆ ಎಂದು ಅಽಕಾರಿಗಳಿಗೆ ಸೂಚಿಸಿದರು.
ಗೃಹ ಲಕ್ಷ್ಮೀ ಯೋಜನೆಯಂತೆ ಕೌಶಲ ತರಬೇತಿ ಮತ್ತು ಯೋಜನೆಗಳ ಸಾಧನೆ ವರದಿ ನೀಡಬೇಕು. ಪಾರಂಪರಿಕ ಮತ್ತು ಪ್ರಾದೇಶಿಕ ಕಲೆಗಳು ನಶಿಸಿ ಹೋಗದಂತೆ ಕ್ರಮ ವಹಿಸಬೇಕು. ನನ್ನ ವೃತ್ತಿ ನನ್ನ ಆಯ್ಕೆ ಹಾಗೂ ಕಲಿಕೆಯೊಂದಿಗೆ ಕೌಶಲ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲಾಽಕಾರಿ ಸ್ನೇಹಲ್ ಆರ್. ಮಾತನಾಡಿ, ಉದ್ಯೋಗ ಆಧಾರಿತ ತರಬೇತಿ ನೀಡುವುದು ಅಗತ್ಯವಿದೆ. ಆ ನಿಟ್ಟಿನಲ್ಲಿ ತರಬೇತಿ ಜತೆಗೆ ಗೌರವ ಸಂಭಾವನೆ ನೀಡಬೇಕಿದೆ ಎಂದರು.
ಇದೇ ವೇಳೆ ನಲ್ ಜಲ್ ಮಿತ್ರ ಯೋಜನೆಯಡಿ ತರಬೇತಿ ಪಡೆದ ಶಿಭಿರಾರ್ಥಿಗಳಿಗೆ ಪ್ರಮಾಣಪತ್ರ, ಟೂಲ್ ಕಿಟ್ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು. ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರವೀಂದ್ರ ದ್ಯಾಬೇರಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net