compol ಡ್ರಗ್ಸ್ಗೆ ಕಡಿವಾಣ ಟ್ರಾಫಿಕ್ ಸಮಸ್ಯೆಗೆ ಪರಿಹಾರ
compol ಹುಬ್ಬಳ್ಳಿ ಧಾರವಾಡ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಭೂಷಣ್ ಬೋರಸೆ ಅವರಿಗೆ ನಿರ್ಗಮಿತ ಆಯುಕ್ತ ಎನ್. ಶಶಿಕುಮಾರ ಅಭಿನಂದಿಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬೋರಸೆ ಭರವಸೆ
ಡ್ರಗ್ಸ್ ಸಮಸ್ಯೆ ಎಲ್ಲ ಕಡೆ ಇದೆ
ಹುಬ್ಬಳ್ಳಿ: compol ಹುಬ್ಬಳ್ಳಿ- ಧಾರವಾಡ ಅವಳಿನಗರದಲ್ಲಿ ಮಾದಕ ದ್ರವ್ಯಗಳಿಗೆ (ಡ್ರಗ್ಸ್) ಕಡಿವಾಣ ಹಾಕುವುದು ಹಾಗೂ ಟ್ರಾಫಿಕ್ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವುದು ತಮ್ಮ ಆದ್ಯತೆಯಾಗಲಿದೆ ಎಂದು ನೂತನ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೋರಸೆ ತಿಳಿಸಿದರು.
ಇಲ್ಲಿಯ ನವನಗರದ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತಾಲಯದಲ್ಲಿ ಗುರುವಾರ ಅಧಿಕಾರ ವಹಿಸಿಕೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಡ್ರಗ್ಸ್ ಸಮಸ್ಯೆ ಎಲ್ಲ ಕಡೆ ಇದೆ. ಅದನ್ನು ಕಂಟ್ರೋಲ್ ಮಾಡಬೇಕಾದರೆ ಮೂಲಕ್ಕೆ ಹೋಗಬೇಕಾಗುತ್ತದೆ. ಬೆಳಗಾವಿಯಲ್ಲಿ ಇದ್ದಾಗ ಡ್ರಗ್ಸ್ ಮಾಫಿಯಾ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು. ಹಿರಿಯ ಅಧಿಕಾರಿಗಳು, ಸಿಬ್ಬಂದಿಯ ಟೀಮ್ ವರ್ಕ್ ಮೂಲಕ ಇದನ್ನು ನಿಯಂತ್ರಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಟ್ರಾಫಿಕ್ ಸಮಸ್ಯೆಯ ಮೂಲಗಳನ್ನು ಕಂಡು ಹಿಡಿಯಲು ಧಾರವಾಡ ಐಐಟಿ ಸೇರಿ ಉನ್ನತ ಶಿಕ್ಷಣ ಸಂಸ್ಥೆಗಳ ಸಹಾಯ ಪಡೆಯಲಾಗುವುದು. ಅವರು ನೀಡುವ ವೈಜ್ಞಾನಿಕ ಪರಿಹಾರಗಳನ್ನು ಚರ್ಚಿಸಿ ಜಾರಿ ಮಾಡಲಾಗುವುದು. ಪೊಲೀಸರು ಕೇವಲ ದಂಡ ಹಾಕುತ್ತಾರೆ ಎಂಬ ಜನರ ಭಾವನೆ ದೂರ ಮಾಡಿ ಟ್ರಾಫಿಕ್ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಉತ್ತರಿಸಿದರು.
ಬೆಳಗಾವಿ ಮಹಾನಗರ ಪೊಲೀಸ್ ಆಯುಕ್ತರಾಗಿ ತಾವು ಕೈಗೊಂಡ ಸುಧಾರಣೆ ಉಪಕ್ರಮಗಳನ್ನು ಮೆಲಕು ಹಾಕಿದ ಅವರು, ಹುಬ್ಬಳ್ಳಿ ಧಾರವಾಡಕ್ಕೂ ಉತ್ತಮ ಎನಿಸುವ ಪೊಲೀಸ್ ಸುಧಾರಣೆಗಳನ್ನು ಕೈಗೊಳ್ಳುವುದಾಗಿ ಹೇಳಿದರು.
ಜನಸ್ನೇಹಿ ಪೊಲೀಸ್ ವ್ಯವಸ್ಥೆ ನಮ್ಮ ಉದ್ದೇಶ. ಅದಕ್ಕಾಗಿ ಜನಪ್ರತಿನಿಧಿಗಳು, ಮಾಧ್ಯಮ ಸೇರಿ ಎಲ್ಲರ ಅಭಿಪ್ರಾಯಕ್ಕೆ ಮನ್ನಣೆ ನೀಡಲಾಗುವುದು. ಕಾನೂನು ಸುವ್ಯವಸ್ಥೆ ಕಾಪಾಡುವುದು ಬಹಳ ಮುಖ್ಯ. ಜತೆಗೆ ಮಹಿಳೆಯರು, ಮಕ್ಕಳ ಸುರಕ್ಷತೆ, ಸೈಬರ್ ಕ್ರೈಂ ತಡೆಗಟ್ಟುವುದು ಮಹತ್ವದ ಕೆಲಸಗಳಾಗಿವೆ ಎಂದರು.
ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಬಹಳ ವರ್ಷಗಳಿಂದಲೂ ಇದೆ. ಆದರೆ, ಇರುವ ಸಿಬ್ಬಂದಿಯಲ್ಲಿಯೇ ಎಷ್ಟು ಸಾಧ್ಯವೋ ಅಷ್ಟು ಉತ್ತಮ ಕೆಲಸಗಳ ಮೂಲಕ ಜನರಿಗೆ ನೆಮ್ಮದಿಯ ಬದುಕು ನೀಡಲು ಪ್ರಯತ್ನಿಸಲಾಗುವುದು.
ಈಗಾಗಲೇ ರೌಡಿ ಶೀಟರ್ನಲ್ಲಿ ಇರುವವರು, ಹಳೇ ದ್ವೇಷ ಇತ್ಯಾದಿ ಕೇಸ್ಗಳ ಬಗ್ಗೆ ಗಮನ ಹರಿಸಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತೇವೆ. ತಪ್ಪು ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಇದೇ ನಾವು ಅವಳಿನಗರ ಜನರಿಗೆ ನೀಡುವ ಅಭಯ ಹಾಗೂ ಭರವಸೆ ಎಂದು ಬೋರಸೆ ಹೇಳಿದರು.
ನಿರ್ಗಮಿತ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ಭೂಷಣ್ ಬೋರಸೆ ಅವರಿಗೆ ಅಧಿಕಾರ ದಂಡ ಹಸ್ತಾಂತರಿಸಿದರು. ಹಿರಿಯ ಅಧಿಕಾರಿಗಳು, ಇನ್ಸಪೆಕ್ಟರ್ಗಳು ಉಪಸ್ಥಿತರಿದ್ದರು.