

ಹುಬ್ಬಳ್ಳಿ: ಇಲ್ಲಿಯ ಭಾರತೀಯ ಮಾನಕ ಸಂಸ್ಥೆಯ (ಬಿಐಎಸ್) ಶಾಖಾ ಕಚೇರಿಯು ವಿಶ್ವ ಗುಣಮಟ್ಟ ದಿನಾಚರಣೆ ಅಂಗವಾಗಿ ಧಾರವಾಡದ ಐಐಟಿಯಲ್ಲಿ ಮಾನಕ ಮಹೋತ್ಸವ ಆಯೋಜಿಸಿತ್ತು.
ಶೈಕ್ಷಣಿಕ, ಕೈಗಾರಿಕಾ ಕ್ಷೇತ್ರ ಮತ್ತು ಬಿಐಎಸ್ನ ಪ್ರತಿನಿಧಿಗಳು ಪಾಲ್ಗೊಂಡು ಪ್ರಮಾಣೀಕರಣದ ಮಹತ್ವ, ಗುಣಮಟ್ಟದ ಉತ್ಪಾದನೆ ಬಗೆಗಿನ ಜಾಗೃತಿ, ನಾವೀನ್ಯತೆ ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತು ಚರ್ಚಿಸಿದರು.
ಭಾರತೀಯ ಮಾನಕ ಸಂಸ್ಥೆ ಮತ್ತು ಐಐಟಿ ನಡುವೆ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು ) ಸಹಿ ಹಾಕಲಾಯಿತು. ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದ ರಾಜ್ಯ ಸಚಿವ ಬಿ.ಎಲ್. ವರ್ಮಾ ಮತ್ತು ನಿಮುಬೆನ್ ಜಯಂತಿಭಾಯ್ ಬಂಭಾನಿಯಾ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡರು.
ಎರಡು ಸಂಸ್ಥೆಗಳ ಮಧ್ಯದ ಸಹಯೋಗವು ಪ್ರಮಾಣೀಕರಣ ಜತೆಗೆ ಬಿಐಎಸ್ ಮತ್ತು ಐಐಟಿ ನಡುವಿನ ಸಾಂಸ್ಥಿಕ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಐಐಟಿ ಧಾರವಾಡದ ನಿರ್ದೇಶಕ ವೆಂಕಪ್ಪಯ್ಯ ಆರ್. ದೇಸಾಯಿ ಮಾತನಾಡಿ, ಗುಣಮಟ್ಟ, ಸಂಶೋಧನೆ ಮತ್ತು ನಾವೀನ್ಯತೆಯನ್ನು ಮುನ್ನಡೆಸುವಲ್ಲಿ ಶೈಕ್ಷಣಿಕ ವಲಯ ಮತ್ತು ಭಾರತೀಯ ಮಾನಕ ಸಂಸ್ಥೆಯ ನಡುವಿನ ಸಹಯೋಗ ಬಹಳ ಮಹತ್ವದ್ದು ಎಂದು ಹೇಳಿದರು.
ಈ ಒಪ್ಪಂದವು ಶೈಕ್ಷಣಿಕ ಮತ್ತು ಕೈಗಾರಿಕಾ ವಲಯಗಳ ನಡುವಿನ ಸಂಪರ್ಕವನ್ನು ಬಲಪಡಿಸಲು, ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳಲ್ಲಿ ಭಾರತೀಯ ಪ್ರಮಾಣೀಕರಣ ಅಳವಡಿಸಿಕೊಳ್ಳಲು ಮತ್ತು ಗುಣಮಟ್ಟ ಆಧಾರಿತ ಹಾಗೂ ಸುಸ್ಥಿರ ತಂತ್ರಜ್ಞಾನಗಳ ಅಭಿವೃದ್ಧಿಗೆ ಉತ್ತಮ ಅವಕಾಶ ಒದಗಿಸುತ್ತದೆ ಎಂದರು.
ತಾಂತ್ರಿಕ ಅಧಿವೇಶನಗಳ ಭಾಗವಾಗಿ, ಕಿರ್ಲೋಸ್ಕರ ಎಲೆಕ್ಟ್ರಿಕ್ ಕಂಪನಿ ಲಿಮಿಟೆಡ್ನ ಗುಣಮಟ್ಟ ವಿಭಾಗದ ಮುಖ್ಯಸ್ಥ ರೇವಣಸಿದ್ದಪ್ಪ ಡಿ.ಎನ್., ಸುಸ್ಥಿರ ಅಭಿವೃದ್ಧಿ ಗುರಿ, ಶುದ್ಧ ಇಂಧನ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಐಐಟಿ ಧಾರವಾಡದ ಡೀನ್ ಪ್ರೊ. ಧೀರಜ್ ವಿ. ಪಾಟೀಲ್ ವಿವಿಧ ವಿಷಯಗಳನ್ನು ಮಂಡಿಸಿದರು. ಬಿಐಎಸ್ ಜಂಟಿ ನಿರ್ದೇಶಕ ಮೋಹಿತ್ ಜನೋಯ್ಯಾ, ಬಿಐಎಸ್ ಚಟುವಟಿಕೆಗಳ ಕುರಿತು ಪ್ರಸ್ತುತಪಡಿಸಿದರು.
ಬಿಐಎಸ್ ಹುಬ್ಬಳ್ಳಿ ಶಾಖಾ ಕಚೇರಿಯ ವಿಜ್ಞಾನಿ-ಇ, ನಿರ್ದೇಶಕ ಮತ್ತು ಮುಖ್ಯಸ್ಥ ಪಿ.ಎನ್. ಮುರಳಿ ಸ್ವಾಗತಿಸಿದರು. ಬಿಐಎಸ್ ಜಂಟಿ ನಿರ್ದೇಶಕ ತುಷಾರ್ ಶರ್ಮಾ ವಿಶ್ವ ಗುಣಮಟ್ಟ ದಿನಾಚರಣೆಯ ಸಂದೇಶ ವಾಚನ ಮಾಡಿದರು. ಬಿಐಎಸ್ ಸಹಾಯಕ ನಿರ್ದೇಶಕ ಅಜಯ್ ಚಕ್ರವರ್ತಿ ವಂದಿಸಿದರು.