ಧಾರವಾಡ:ಯಾವುದೇ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ಮೂಲಕ ವ್ಯಕ್ತಿಯು ಸಾವಿನ ನಂತರವೂ ಎಲ್ಲರ ಮನದಲ್ಲಿ ಜೀವಂತವಾಗಿರುತ್ತಾನೆ. ಅವರ ಜನಪರ ಕಾರ್ಯ-ಚಿಂತನೆಗಳು ಸ್ಮರಣೆಗೆ ಪರಿಗಣಿತವಾಗುತ್ತವೆ ಎಂದು ಕವಿವ ಸಂಘದ ಗೌರವ ಉಪಾಧ್ಯಕ್ಷ ಕೆ.ಬಿ.ನಾವಲಗಿಮಠ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಧಾರವಾಡ ತಾಲೂಕು ಅಮ್ಮಿನಬಾವಿ ಗ್ರಾಮದ ಶ್ರೇಷ್ಠ ಕೃಷಿಕ ದಿ.ಬಸಪ್ಪ ಶಂಕ್ರೆಪ್ಪ ಮುಂದಿನಮನಿ ದತ್ತಿ ಸಂಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕೃಷಿ ಉಪನ್ಯಾಸ ಮತ್ತು ಬಸವ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಹೆಚ್ಚು ಶಿಕ್ಷಣ ಪಡೆಯದಿದ್ದರೂ ಸಹ ಕೃಷಿಯಲ್ಲಿ ಅಪಾರ ಅನುಭವ ಹಾಗೂ ಪ್ರಗತಿಪರ ಕಾರ್ಯಕ್ಷಮತೆ ಹೊಂದಿ ಓರ್ವ ಶಿಸ್ತು ಬದ್ಧ ಶ್ರೇಷ್ಠ ಕೃಷಿಕರಾಗಿ ಅಮ್ಮಿನಬಾವಿ ಗ್ರಾಮದ ದಿ.ಬಸಪ್ಪ ಮುಂದಿನಮನಿ ಎಲ್ಲರ ಗಮನ ಸೆಳೆದಿದ್ದರು ಎಂದರು.
`ಬಸವ ಕೃಷಿ ಪ್ರಶಸ್ತಿ' ಸ್ವೀಕರಿಸಿ ಉಪನ್ಯಾಸ ನೀಡಿದ ಹಿರೇಗುಂಜಳದ ಸಾವಯವ ಕೃಷಿಕ ಮಲ್ಲೇಶಪ್ಪ ಬಿಸಿರೊಟ್ಟಿ, ರೈತರು ಕೇವಲ ಸಗಣಿ ಗೊಬ್ಬರ ಮಾತ್ರ ಬಳಕೆ ಮಾಡಿ ಕೃಷಿ ಮಾಡಬೇಕು. ಸಗಣಿ ಗೊಬ್ಬರದಲ್ಲಿ ಅಗಾಧ ಶಕ್ತಿ ಸಂಚಯವಿದ್ದು, ಇದು ಭೂಮಿಯ ಮಣ್ಣಿನ ಕಣಗಳಲ್ಲಿ ನಿರಂತರ ತೇವಾಂಶ ಹಿಡಿದಿಟ್ಟುಕೊಳ್ಳುವ ವಿಶಿಷ್ಟ ಸಾಮರ್ಥ್ಯ ಹೊಂದಿದೆ ಎಂದರು.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) 2025ರ ಪರೀಕ್ಷೆಯಲ್ಲಿ ಉತ್ತೀರ್ಣರಾದ ರಿಷಿ ಕೃಷ್ಣ ಬೊಂಗಾಳೆ ಅವರನ್ನು ಗೌರವಿಸಲಾಯಿತು. ವಕೀಲ ಸದಾನಂದ ಮುಂದಿನಮನಿ, ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಮಾತನಾಡಿದರು.
ಗುರು ಹಿರೇಮಠ, ಬಸವಣ್ಣೆಪ್ಪ ನವಲಗುಂದ, ಗುರುಮೂರ್ತಿ ಯರಗಂಬಳಿಮಠ, ಮಾಳಪ್ಪ ಅಮರಶೆಟ್ಟಿ, ಪಿ.ಎಸ್.ಪತ್ರಾವಳಿ, ಗಂಗಾಧರ ಹುರಳಿ, ಕೆ.ಎನ್.ಜಾಕೋಜಿ, ದಯಾನಂದ ಮುಂದಿನಮನಿ, ಕೃಷ್ಣ ಬೊಂಗಾಳೆ ಇದ್ದರು.