ನೈಸರ್ಗಿಕ ಇದ್ದಿಲು ಜತೆಗೆ ಪೂರಕ ಇಂಧನವಾಗಿ ಬಳಸಿಕೊಳ್ಳಲಾಗುತ್ತದೆ
ಹುಬ್ಬಳ್ಳಿ :
waste ಘನತ್ಯಾಜ್ಯವನ್ನು ಸಂಸ್ಕರಿಸಿ ಪರ್ಯಾಯ ಇಂಧನ ಮೂಲವನ್ನಾಗಿ ಇದ್ದಿಲು (ಟೋರಿಫೈಯ್ಡ್ ಚಾರಕೋಲ್ ಪ್ರೋಡಕ್ಸನ್ ) ಉತ್ಪಾದಿಸುವ ಘಟಕದ ಪ್ರಾಯೋಗಿಕ ಪರೀಕ್ಷೆ ಪೂರ್ಣಗೊಂಡಿದ್ದು, 2027ರ ಜನವರಿಯಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ.
ಕೇಂದ್ರ ಸರ್ಕಾರದ 157 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿ ಹೊರ ವಲಯದ ಹಳೇ ಗಬ್ಬೂರು ಬಳಿ ನಿರ್ವಣಗೊಂಡಿರುವ ಈ ಸ್ಥಾವರಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶುಕ್ರವಾರ ಪರಿಶೀಲಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಘನತ್ಯಾಜ್ಯದಿಂದ ಚಾರಕೋಲ್ ಉತ್ಪಾದಿಸುವ ಮೊದಲ ಸ್ಥಾವರ ವಾರಣಾಸಿಯಲ್ಲಿ ನಿರ್ವಣಗೊಂಡಿದೆ.
ಹುಬ್ಬಳ್ಳಿಯಲ್ಲಿ ನಿರ್ವಣಗೊಂಡಿರುವ ಸ್ಥಾವರ ದೇಶದ ಎರಡನೇ ಹಾಗೂ ದಕ್ಷಿಣ ಭಾರತ ಮತ್ತು ಕರ್ನಾಟಕದ ಮೊದಲ ಸ್ಥಾವರವಾಗಿದೆ ಎಂದು ಹೇಳಿದರು.
ಇಲ್ಲಿ ಉತ್ಪತ್ತಿಯಾಗುವ ಚಾಕೋಲ್ ಅನ್ನು ವಿಜಯಪುರ ಜಿಲ್ಲೆ ಕೂಡಗಿಯಲ್ಲಿರುವ ಉಷ್ಣಸ್ಥಾವರದಲ್ಲಿ ನೈಸರ್ಗಿಕ ಇದ್ದಿಲು ಜತೆಗೆ ಪೂರಕ ಇಂಧನವಾಗಿ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಪ್ಲಾಸ್ಟಿಕ್ ಸೇರಿದಂತೆ ಎಲ್ಲ ರೀತಿಯ ಒಣ ಕಸ, ಮಣ್ಣು, ಧೂಳು ಎಲ್ಲವನ್ನು ಸ್ವಚ್ಛಗೊಳಿಸಲಾಗುತ್ತದೆ. ನಂತರ ಒಣಗಿಸಿ, ಕಾಯಿಸಿ, ಇದ್ದಿಲು ರೀತಿಯ ಪುಡಿ ಮಾಡಲಾಗುತ್ತದೆ. ನಂತರ ವಿದ್ಯುತ್ ಉತ್ಪಾದನೆಗೆ ಕೂಡಗಿಗೆ ಕಳಿಸಲಾಗುತ್ತದೆ ಎಂದರು.
ಹುಬ್ಬಳ್ಳಿಯ ಕಾರವಾರ ರಸ್ತೆ ಹಾಗೂ ಧಾರವಾಡದ ಹೊಸ ಯಲ್ಲಾಪುರದಲ್ಲಿನ ತ್ಯಾಜ್ಯ ಸಂಗ್ರಹ ಘಟಕದಲ್ಲಿ ಕಸದ ಗುಡ್ಡೆ ಕರಗಿಸುವುದು ಸವಾಲಿನ ಕೆಲಸವಾಗಿತ್ತು ಎಂದರು.
ಮಹಾನಗರ ಪಾಲಿಕೆ ಒದಗಿಸಿದ 8 ಎಕರೆ ಜಾಗದಲ್ಲಿ ಎರಡು ಯುನಿಟ್ಗಳನ್ನು ನಿರ್ವಿುಸಲಾಗಿದೆ. ನಿತ್ಯ 200 ಟನ್ ತ್ಯಾಜ್ಯವನ್ನು ಸಂಸ್ಕೃರಿಸುವ ಸಾಮರ್ಥ್ಯ ಇದೆ.
ತ್ಯಾಜ್ಯದಿಂದ ಇದ್ದಿಲು ತಯಾರಿಸುವ ಪ್ರಮಾಣ ಶೇ. 30 ರಿಂದ 35ರಷ್ಟಿದೆ. ಪ್ರಾಯೋಗಿಕ ಪರೀಕ್ಷೆಯಲ್ಲಿ ಸತತ 72 ತಾಸುಗಳವರೆಗೆ ಈ ಉಪಕರಣ ಕಾರ್ಯನಿರ್ವಹಿಸಿ, 250 ಟನ್ ಚಾರಕೋಲ್ ಉತ್ಪಾದಿಸಿದೆ ಎಂದು ತಿಳಿಸಿದರು.
ಈ ಘಟಕದಲ್ಲಿ ಬಳಸಲಾಗುತ್ತಿರುವ ಟೊರೆಫೆಕ್ಷನ್ ತಂತ್ರಜ್ಞಾನವು ಅತ್ಯಂತ ವಿಶೇಷವಾದದ್ದು. ಇಲ್ಲಿ ಕಸವನ್ನು ಸುಟ್ಟು ಪರಿಸರ ಮಾಲಿನ್ಯ ಮಾಡಲಾಗುವುದಿಲ್ಲ.
ಬದಲಿಗೆ, ಅತ್ಯಲ್ಪ ಆಮ್ಲಜನಕದ ವಾತಾವರಣದಲ್ಲಿ ಕಸವನ್ನು ನಿರ್ದಿಷ್ಟ ತಾಪಮಾನದಲ್ಲಿ ಕಾಯಿಸಲಾಗುತ್ತದೆ. ಈ ಪ್ರಕ್ರಿಯೆಯಿಂದ ಕಸವು ಟೊರೆಪೈಡ್ ಚಾರಕೋಲ್ ಅಥವಾ ಪರಿಸರ ಸ್ನೇಹಿ ಹಸಿರು ಇದ್ದಿಲಾಗಿ ಬದಲಾಗುತ್ತದೆ. ಕರ್ನಾಟಕದಲ್ಲಿ ಈ ರೀತಿಯ ತಂತ್ರಜ್ಞಾನ ಹೊಂದಿರುವ ಪ್ರಥಮ ಘಟಕ ಇದಾಗಿದೆ ಎಂದರು.
ಹುಬ್ಬಳ್ಳಿ-ಧಾರವಾಡದಲ್ಲಿ ನಿತ್ಯ ಸುಮಾರು 500 ರಿಂದ 600 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ಅದರಲ್ಲಿ 300 ಟನ್ ಹಸಿ ಕಸ ಹಾಗೂ 200 ಟನ್ ಒಣ ಕಸ ಸಂಗ್ರಹಗೊಳ್ಳುತ್ತದೆ. ಸಂಗ್ರಹಗೊಳ್ಳುತ್ತಿದ್ದ ಕಸದ ಗುಡ್ಡೆ ಈ ನೂತನ ಯೋಜನೆಯಿಂದಾಗಿ ಶಾಶ್ವತ ಮುಕ್ತಿ ಸಿಗಲಿದೆ ಎಂದು ತಿಳಿಸಿದರು.
2020-21ರಲ್ಲಿ ಸಿಮೆಂಟ್ ಕಂಪನಿಗಳು ಮತ್ತು ಉಷ್ಣ ವಿದ್ಯುತ್ ಕಂಪನಿಗಳು ಸೇರಿದಂತೆ ಹಲವು ಕಂಪನಿಗಳ ಜತೆ ಮಾತುಕತೆ ನಡೆಸಿತ್ತು.
ಇದರಲ್ಲಿ ಎನ್ಟಿಪಿಸಿ ಜತೆ ಅಂತಿಮ ಒಪ್ಪಂದ ಮಾಡಿಕೊಂಡು ಘಟಕ ಆರಂಭಿಸಲು ಕಂಪನಿಯು ಪಾಲಿಕೆಯೊಂದಿಗೆ ಸಹಮತ ವ್ಯಕ್ತಪಡಿಸಿತ್ತು ಎಂದು ಹೇಳಿದರು.
ಧಾರವಾಡದಲ್ಲಿ ಗ್ಯಾಸ್ ಯುನಿಟ್ ಆರಂಭಿಸುವ ಯೋಜನೆ ಇದೆ. ಅಲ್ಲಿ ಹಸಿ ಕಸವೂ ಉಪಯೋಗಕ್ಕೆ ಬರುತ್ತದೆ ಎಂದರು.