ಹುಬ್ಬಳ್ಳಿ: ಕಾನೂನು ಬಾಹಿರವಾಗಿ ಜಾನುವಾರುಗಳನ್ನು cattle case ಕೂಡಿಹಾಕಿ ಕಸಾಯಿ ಖಾನೆಗೆ ಸಾಗಿಸಲಾಗುತ್ತಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಶನಿವಾರ ರಾತ್ರಿ ಪ್ರತಿಭಟನೆ ನಡೆಸಿದ್ದ ಬೆನ್ನಲ್ಲಿಯೇ ಇಲ್ಲಿಯ ಕಸಬಾಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇಬ್ರಾಹಿಂಪೂರ 1ನೇ ಕ್ರಾಸ್‌ನಲ್ಲಿರುವ ಕಸಾಯಿ ಡೆವಲ್ಪಮೆಂಟ್ ಅಸೋಸಿಯೇಷನ್ ಹೆಸರಿನ ಕಟ್ಟಡದಲ್ಲಿ ಬಹಳಷ್ಟು ಎಮ್ಮೆಯ ಕರು, ಆಕಳು, ಆಕಳು ಕರು, ವಿವಿಧ ತಳಿಯ ದನಗಳನ್ನು ಕಟ್ಟಿ ಹಾಕಿದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರು ಕಟ್ಟಡದಲ್ಲಿದ್ದ 62 ದನಗಳನ್ನು ರಕ್ಷಣೆ ಮಾಡಿದ್ದು, ಕಟ್ಟಡ ಯಾರದ್ದು? ಯಾರು ದನಗಳನ್ನು ಕಟ್ಟಿ ಹಾಕಿದ್ದರು? ಯಾವ ಉದ್ದೇಶಕ್ಕಾಗಿ ಕರೆತರಲಾಗಿತ್ತು ? ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಕಸಬಾಪೇಟೆ ಠಾಣೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಶನಿವಾರ ರಾತ್ರಿ ಕಸಬಾಪೇಟೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಪಾಲಿಕೆ ಆಯುಕ್ತರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.