ಹುಬ್ಬಳ್ಳಿ ತಾಲೂಕಿನ ಬುಡರಶಿಂಗಿ budarasingi school ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಚ್ಚುತ್ತಿರುವುದನ್ನು ವಿರೋಧಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ: ತಾಲೂಕಿನ ಬುಡರಶಿಂಗಿ budarasingi school ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನು ಕೆಪಿಎಸ್ ಹೆಸರಲ್ಲಿ ಮುಚ್ಚುತ್ತಿರುವುದನ್ನು ವಿರೋಧಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ಸಾರ್ವಜನಿಕ ಶಿಕ್ಷಣ ಉಳಿಸಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಶರಣಬಸವ ಗೋನವಾರ ಮಾತನಾಡಿ, ಅದರಗುಂಚಿಯಲ್ಲಿ ಕೆಪಿಎಸ್ ಶಾಲೆ ಆರಂಭಿಸಿ ಬುಡರಶಿಂಗಿ ಶಾಲೆಯನ್ನು ಅದಕ್ಕೆ ವಿಲೀನ ಮಾಡಲಾಗುತ್ತಿದೆ. ಬಡವರ ಮಕ್ಕಳು ವಾಸಿಸುವ ಪ್ರದೇಶದಲ್ಲೇ ಶಿಕ್ಷಣ ಪಡೆಯಬೇಕೆಂದು ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆಯಂತಹ ಮಹಾನ್ ವ್ಯಕ್ತಿಗಳು ಹೋರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸಮುದಾಯದ ನಡುವೆ ಶಾಲೆಗಳು ಆರಂಭವಾಗಿವೆ. ಇದಕ್ಕೆ ವಿರುದ್ಧವಾಗಿ ಸರ್ಕಾರವು ಇಂದು ಶಾಲೆಗಳನ್ನು ಮುಚ್ಚುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿದರು.
ಸಮಿತಿ ಬುಡರಸಿಂಗಿ ಅಧ್ಯಕ್ಷ ಮಂಜುನಾಥ ಕಟಗಿ ಮಾತನಾಡಿ, ನಮ್ಮೂರಲ್ಲಿ ಇರೋದೇ ಇದೊಂದು ಶಾಲೆ. ಇದನ್ನು ಮುಚ್ಚಿದರೆ ಮಕ್ಕಳನ್ನು ಅದರಗುಂಚಿಗೆ ಕಳುಹಿಸಬೇಕು. ರಾಷ್ಟ್ರೀಯ ಹೆದ್ದಾರಿ ದಾಟಿ ಹೋಗಬೇಕು. ಏನಾದರೂ ಅನಾಹುತ ಆದರೆ ಯಾರು ಹೊಣೆ? ಹಾಗಾಗಿ ನಮ್ಮ ಶಾಲೆ ಮುಚ್ಚಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನಂತರ ಊರಿನ ಶಾಲೆ ಉಳಿಸುವ ಹೋರಾಟಕ್ಕಾಗಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು.
ಉಪಾಧ್ಯಕ್ಷೆ ಗಂಗಾ ಹುಕ್ಕಿನಕೇರಿ, ಪ್ರಮುಖರಾದ ಮುಲ್ಲಾಸಾಬ್ ಸೈದನ್ನವರ, ಹೀನಾ ಕೌಸರ್ ಸೈದನ್ನವರ, ಅಂಜುಮಾ ಮುಂದಿನಮನಿ, ಶೇಕಪ್ಪ ಜಗಳೂರ, ಸುಭಾಷ ಜಗಳೂರ ಇತರರು ಪ್ರತಿಭಟನೆಯಲ್ಲಿದ್ದರು.