ಹುಬ್ಬಳ್ಳಿ: bsnl ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಡಿಜಿಟಲ್ ಅಂತರ ಕಡಿಮೆ ಮಾಡುವುದು, ಸಮಗ್ರ ಸಾಮಾಜಿಕ- ಆರ್ಥಿಕ ಅಭಿವೃದ್ಧಿ ಉತ್ತೇಜಿಸುವ ಸಲುವಾಗಿ ಭಾರತ್ ನೆಟ್ ಉದ್ಯಮಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಬಿಎಸ್ಎನ್ಎಲ್ ಹಿರಿಯ ಪ್ರಧಾನ ವ್ಯವಸ್ಥಾಪಕ ಧನಂಜಯಕುಮಾರ ತ್ರಿಪಾಟಿ ತಿಳಿಸಿದರು.
ದೇಶದ ಎಲ್ಲ ಗ್ರಾಮ ಪಂಚಾಯಿತಿಗಳು, ಹಳ್ಳಿಗಳು ಇದರ ಪ್ರಯೋಜನ ಪಡೆಯಬಹುದು. ಭಾರತ ಸರ್ಕಾರವು ಗ್ರಾಪಂ, ಗ್ರಾಮಗಳಲ್ಲಿ ಎ್ಟಿಟಿಎಚ್ ಹೈ ಸ್ಪೀಡ್ ಬ್ರಾಡಬ್ಯಾಂಡ್ ಸಂಪರ್ಕಗಳನ್ನು ಒದಗಿಸುವ ಪ್ರಮುಖ ಯೋಜನೆ ರೂಪಿಸಿದೆ. ಗ್ರಾಹಕರು ಫ್ರಾಂಚೈಸಿ ಪಡೆದುಕೊಳ್ಳಬಹುದು. ನಿರುದ್ಯೋಗಿ ಯುವಕರಿಗೆ ಇದೊಂದು ಒಳ್ಳೆಯ ಅವಕಾಶ, ಉತ್ತಮ ಆದಾಯ ಗಳಿಸಬಹುದು ಎಂದರು.
ಮೊಡೆಮ್, ಶೂನ್ಯ ಆಪ್ಟಿಕಲ್ ಫೈಬರ್ ಕೇಬಲ್ ಕಾಸ್ಟ್ ಮತ್ತು ಶೂನ್ಯ ಇನ್ಸ್ಟಾಲ್ಲಿಂಗ್ ಶುಲ್ಕದ ಪ್ರಯೋಜನ ಸಹ ನೀಡಲಾಗುತ್ತಿದೆ. ಧಾರವಾಡ, ಹಾವೇರಿ, ಗದಗ ಒಳಗೊಂಡ ಬಿಎಸ್ಎನ್ಎಲ್ ವಲಯದಲ್ಲಿ 502 ಗ್ರಾಮ ಪಂಚಾಯಿತಿಗಳಿದ್ದು, 360 ಗ್ರಾಪಂ ವ್ಯಾಪ್ತಿಯಲ್ಲಿ ನೆಟ್ವರ್ಕ್ ಕಾರ್ಯಾಚರಣೆಯಲ್ಲಿದೆ.
ಇದರಲ್ಲಿ 200 ಗ್ರಾಪಂನಲ್ಲಿ ಫ್ರಾಂಚೈಸಿ ಪಡೆಯಲು ಅವಕಾಶ ಇದೆ. ನೆಟ್ವರ್ಕ್ ಇಲ್ಲದ ಯಾವುದಾದರೂ ಊರು ಇದ್ದರೆ ಕಚೇರಿಗೆ ತಿಳಿಸಿದರೆ ಸಂಸದರ ಶಿಫಾರಸಿನೊಂದಿಗೆ ಗ್ರಾಮಕ್ಕೆ ಸಂಪರ್ಕ ಸೇವೆ ಕಲ್ಪಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಡಿಜಿಎಂ ರಾಜಕುಮಾರ ಆಸಂಗಿ ಮಾತನಾಡಿ, ಬಿಎಸ್ಎನ್ಎಲ್ ಗ್ರಾಹಕರಿಗೆ 5ಜಿ ಸೇವೆ ನೀಡುವ ಕುರಿತು ಟೆಸ್ಟಿಂಗ್ ನಡೆಯುತ್ತಿದೆ. ಅಪ್ಗ್ರೇಡ್ ಆಗಲಿದೆ. ಜತೆಗೆ ಟಿವಿ ಚಾನಲ್ಗಳನ್ನು ಕಡಿಮೆ ಬೆಲೆಯಲ್ಲಿ ನೀಡಲು ಉದ್ದೇಶಿಸಲಾಗಿದೆ. ಫ್ರಾಂಚೈಸಿ ಪಡೆದುಕೊಂಡವರಿಗೆ ಅನುಕೂಲಗಳನ್ನು ಒದಗಿಸಿ ಆದಾಯವೂ ಸಿಗುವಂತಹ ಯೋಜನೆ ಇದಾಗಿದೆ ಎಂದರು.
ಮೊಬೈಲ್ ಸಂಪರ್ಕ ವಿಭಾಗದ ಡಿಜಿಎಂ ಆರ್.ಎಸ್. ಕದಂ ಮಾತನಾಡಿ, ಕೇಬಲ್ ಮೂಲಕ ಸಂಪರ್ಕ ಇರುವುದರಿಂದ ನೆಟ್ವರ್ಕ್ ಸ್ಪೀಡ್ನಲ್ಲಿ ವ್ಯತ್ಯಾಸವಾಗುವುದಿಲ್ಲ. ಗ್ರಾಹಕರು, ಗ್ರಾಮಸ್ಥರು ಆಯ್ಕೆ ಮಾಡಿದ ಯೋಜನೆ ಪ್ರಕಾರ ಮಾಸಿಕ ಬಿಲ್ ಮಾತ್ರ ಪಾವತಿಸಬೇಕು ಎಂದರು.