ರೈತ ಹುತ್ಮಾತ ದಿನಾಚಾರಣೆ ಅಂಗವಾಗಿ ನವಲಗುಂದ ಪಟ್ಟಣದ ರೈತ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಂಚಗೃಹ ಹಿರೇಮಠ ಇಮ್ಮಡಿ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಲೋಕನಾಥ ಹೆಬಸೂರ, ಮಹೇಶ ಹಳ್ಳದ, ಮೈಲಾರಪ್ಪ ವೈದ್ಯ ಇತರರು ಇದ್ದರು.
Published on:
Copied
Follow Us
ನವಲಗುಂದ: ಕುಡಿಯುವ ನೀರಿನ ಯೋಜನೆಗಾಗಿ (MAHADAYI) ಈ ಭಾಗದ ರೈತ ಕುಲ 46 ವರ್ಷಗಳಿಂದ ವಿವಿಧ ರೀತಿಯ ಹೋರಾಟ ನಡೆಸುತ್ತಿದ್ದರೂ ಯಾವದೇ ಪ್ರಯೋಜವಾಗಿಲ್ಲ. ಹೀಗಾಗಿ ಒಂದು ಬಾರಿ ಮುಂಬರುವ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸಿದರೆ ರಾಜಕೀಯ ಪಕ್ಷಗಳಿಗೆ ಪಾಠ ಕಲಿಸಲು ಸಾಧ್ಯ ಎಂದು ಪಂಚಗ್ರಹ ಹಿರೇಮಠದ ಇಮ್ಮಡಿ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ರೈತ ಹುತ್ಮಾತ ದಿನಾಚಾರಣೆ ಅಂಗವಾಗಿ ಪಟ್ಟಣದ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಶ್ರೀಗಳು, ‘ಮೂರು ಜಿಲ್ಲೆಗಳ 13 ತಾಲೂಕುಗಳ ಜನತೆ ಮಹದಾಯಿ (MAHADAYI) ಹಾಗೂ ಕಳಸಾ- ಬಂಡೂರಿ ಯೋಜನೆ ಜಾರಿಗಾಗಿ ಈ ರೀತಿ ಗಮನ ಸೆಳೆಯಬೇಕು’ ಎಂದರು.
ಈ ಭಾಗದ ರೈತ ಹೋರಾಟಗಾರರು ರಸ್ತೆ ಸಂಚಾರ ತಡೆ, ಪಟಣ ಬಂದ್ ಮಾಡುವುದರಿಂದ ನಮಗೆ ನಾವೇ ತೊಂದರೆ ಮಾಡಿಕೊಂಡತೆ ಹೊರತು ಸರ್ಕಾರಕ್ಕಲ್ಲ. ಏನೇ ಹಾನಿಯಾದರೂ ನಮ್ಮ ಮೇಲೆ ಹಾಕಿ ತಮ್ಮ ಕುರ್ಚಿಯನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ. ಇನ್ನು ಮುಂದೆಯಾದರೂ ರೈತರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು’ಎಂದರು.
ರೈತ ಮುಖಂಡ ಲೋಕನಾಥ ಹೆಬಸೂರ ಮಾತನಾಡಿ, ನಾವು ದಶಕಗಳಿಂದ ಮಹದಾಯಿ ಹಾಗೂ ಕಳಸಾ-ಬಂಡೂರಿ ನೀರಿಗಾಗಿ ರಸ್ತೆಗಿಳಿದು ಹೋರಾಟ ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ರಾಜಕೀಯ ಮುಖಂಡರು ಒಬ್ಬರ ಮೇಲೊಬ್ಬರು ಗೂಬೆ ಕೂರಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ. ಇದರಿಂದಾಗಿ ಯೋಜನೆ ಮತ್ತಷ್ಟು ನನೆಗುದಿಗೆ ಬಿದ್ದಿದೆ. ಈಗ ರೈತರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಬಂದಿದೆ. ಇದು ನಮ್ಮ ಬದುಕಿನ ಹಕ್ಕಿನ ಹೋರಾಟವಾಗಿದ್ದು, ನಾವೆಲ್ಲರೂ ಮತ್ತೆ ಸಂಘಟಿತರಾಗಿ ಹೋರಾಟವನ್ನು ತೀವ್ರಗೊಳಿಸಬೇಕಾಗಿದೆ ಎಂದರು.
ಮಹೇಶ ಹಳ್ಳದ, ಮೈಲಾರಪ್ಪ ವೈದ್ಯ, ಎಂ.ಡಿ. ಕುಲಕರ್ಣಿ, ಅಣ್ಣಪ್ಪ ಭಾಗಿ, ಪ್ರೇಮಾ ನಾಯ್ಕರ, ಬಶೀರ ಅಹ್ಮದ ಹುನಗುಂದ, ಅಡಿವೆಪ್ಪ ಶಿರಸಂಗಿ, ದೇವೇಂದ್ರಪ್ಪ ಹಳ್ಳದ ಇತರರು ಇದ್ದರು.