blood donation ಹುಬ್ಬಳ್ಳಿಯಲ್ಲಿ ಬ್ರಾಹ್ಮಣ ಸಮಾಜದಿಂದ ಏರ್ಪಡಿಸಿರುವ ಬೃಹತ್ ರಕ್ತದಾನ ಶಿಬಿರದ ಪ್ರಚಾರ ಫಲಕಗಳನ್ನು ಶುಕ್ರವಾರ ಲಕ್ಷ್ಮಣ ಕುಲಕರ್ಣಿ, ದತ್ತಮೂರ್ತಿ ಕುಲಕರ್ಣಿ ಬಿಡುಗಡೆ ಮಾಡಿದರು. ಕಿರಣ ಗಡ, ವೆಂಕಟೇಶ ದಿವಾನ ಇತರರು ಇದ್ದರು.
Published on:
Copied
Follow Us
ಹುಬ್ಬಳ್ಳಿ: blood donation ಹುಬ್ಬಳ್ಳಿ ಧಾರವಾಡ ಸಮಸ್ತ ಬ್ರಾಹ್ಮಣ ಸಮಾಜ ಹಾಗೂ ಶಾ ದಾಮಜಿ ಛೇಡಾ ಮೆಮೊರಿಯಲ್ ರಾಷ್ಟ್ರೊತ್ಥಾನ ರಕ್ತ ಕೇಂದ್ರ, ಸೃಷ್ಟಿ ರಾಷ್ಟ್ರೊತ್ಥಾನ ಪ್ರಯೋಗಾಲಯ ಇವುಗಳ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಇಲ್ಲಿಯ ಭವಾನಿನಗರದ ರಾವೇಂದ್ರಸ್ವಾಮಿ ಮಠದ ಶ್ರೀ ಸುಜಯೀಂದ್ರ ಸಭಾಭವನದಲ್ಲಿ ಮಾರ್ಚ್ 1ರಂದು ಬೆಳಗ್ಗೆ 8ರಿಂದ ಆಯೋಜಿಸಲಾಗಿದೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಲಕ್ಷ್ಮಣ ಕುಲಕರ್ಣಿ, ಸಮಾಜದ ವತಿಯಿಂದ ಇದು ಏಳನೇ ಬಾರಿ ಆಯೋಜಿಸುತ್ತಿರುವ ಶಿಬಿರವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲ ಜನ ಸಮುದಾಯದವರು ರಕ್ತದಾನ ಮಾಡಬೇಕು ಎಂದು ಮನವಿ ಮಾಡಿದರು.
ರಕ್ತಕೇಂದ್ರದ ಟ್ರಸ್ಟಿ ದತ್ತಮೂರ್ತಿ ಕುಲಕರ್ಣಿ ಮಾತನಾಡಿ, ಪ್ರತಿ ಬಾರಿ 300ಕ್ಕಿಂತ ಹೆಚ್ಚು ಜನರು ರಕ್ತದಾನ ಮಾಡುತ್ತ ಬಂದಿದ್ದಾರೆ. ಈ ಬಾರಿ 500ಕ್ಕೂ ಹೆಚ್ಚು ಜನರಿಂದ ರಕ್ತದಾನ ಮಾಡಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಹಾಗಾಗಿ ಹೆಚ್ಚಿನ ಯುವಕರು ರಕ್ತದಾನಕ್ಕೆ ಮುಂದೆ ಬರಬೇಕು. ರಕ್ತದಾನದಿಂದ ಅನೇಕ ಪ್ರಯೋಜನಗಳಿವೆ. ಮುಖ್ಯವಾಗಿ ಬಿಪಿ, ಶುಗರ್ ನಿಯಂತ್ರಣದಲ್ಲಿರುತ್ತದೆ. ಅಲ್ಲದೇ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುವುದರಿಂದ ಚೇತೋಹಾರಿಯಾಗಿ ಜೀವಿಸಬಹುದು ಎಂದರು.
ಶ್ರೀಗುರು ರಾಘವೇಂದ್ರ ಸ್ವಾಮಿಗಳ 431ನೇ ವರ್ಧಂತಿ ಉತ್ಸವ ಇರುವುದರಿಂದ ಭಕ್ತರು ರಕ್ತದಾನ ಮಾಡುವ ಮೂಲಕ ರಾಯರ ಕೃಪೆಗೆ ಪಾತ್ರರಾಗಬೇಕು. ಅಂದು ಬೆಳಗ್ಗೆ 11ಕ್ಕೆ ಶಿಬಿರ ಉದ್ಘಾಟನೆ ನಡೆಯಲಿದೆ. ಬೆಳಗ್ಗೆಯಿಂದ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.