(black spot) ಅಪಘಾತ ಸ್ಥಳ ಇದ್ರೂ ಹಂಗಾ ಓಡಾಡ್ಬೇಕ್ ನೋಡ್ರೀ...

ಹುಬ್ಬಳ್ಳಿಯ (black spot) ಕೋಟಿಲಿಂಗ ನಗರದಲ್ಲಿ ಬಿದ್ದಿರುವ ಹೊಂಡದಲ್ಲಿಯೇ ಓಡಾಡುತ್ತಿರುವ ವಾಹನಗಳು.
ಹುಬ್ಬಳ್ಳಿಯ (black spot) ಕೋಟಿಲಿಂಗ ನಗರದಲ್ಲಿ ಬಿದ್ದಿರುವ ಹೊಂಡದಲ್ಲಿಯೇ ಓಡಾಡುತ್ತಿರುವ ವಾಹನಗಳು.
Published on

ಪ್ರಮುಖ ಮುಖ್ಯಾಂಶಗಳು

  • ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ
  • 150ಕ್ಕೂ ಹೆಚ್ಚು ಅಪಘಾತ ಸ್ಥಳ
ಹುಬ್ಬಳ್ಳಿ: ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಅಪಘಾತ ಸ್ಥಳಗಳನ್ನು (ಬ್ಲಾಕ್ ಸ್ಪಾಟ್) (black spot) ಗುರುತಿಸಿದ್ದು, ಲೋಕೋಪಯೋಗಿ ಇಲಾಖೆ ಹಾಗೂ ವಾಕರಸಾ ಸಂಸ್ಥೆ ಜಂಟಿ ಅಭಿವೃದ್ಧಿಗೆ ಇದುವರೆಗೂ ಆದ್ಯತೆ ನೀಡಿಲ್ಲ. ಬದಲಿಗೆ ಸಭೆ ನಡೆಸಿ  ಅಂತಿಮ ತೀರ್ಮಾನಿಸುವ ಇಂಗಿತ ವ್ಯಕ್ತವಾಗುತ್ತಿದೆ.
ಸಂಸ್ಥೆ ವ್ಯಾಪ್ತಿಯಲ್ಲಿ ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಗದಗ, ಹಾವೇರಿ, ಬಾಗಲಕೋಟ ಜಿಲ್ಲೆ ಸೇರಿ ಒಟ್ಟು 9 ವಿಭಾಗಗಳಿವೆ. ಅಲ್ಲಿಯ ರಾಷ್ಟ್ರೀಯ, ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆಗಳು ಮತ್ತು ಸಾಮಾನ್ಯ ರಸ್ತೆಗಳಲ್ಲಿ ಅಪಘಾತ ವಲಯಗಳ ಕುರಿತು ಸಮೀಕ್ಷೆ ನಡೆಸಲಾಗಿದೆ.
ಇವುಗಳ ಅಭಿವೃದ್ಧಿಯಿಂದ ಮುಂದಾಗಬಹುದಾದ ಅಪಘಾತಗಳನ್ನು ತಡೆಯುವ ಉದ್ದೇಶ ಹೊಂದಲಾಗಿದೆ.
ರಾಷ್ಟ್ರೀಯ ಹೆದ್ದಾರಿಯ 47, ರಾಜ್ಯ ಹೆದ್ದಾರಿಯ 73 ಹಾಗೂ ಇತರ 30 ರಸ್ತೆಗಳನ್ನೊಳಗೊಂಡು ಒಟ್ಟು 150 ಸ್ಥಳಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂಬುದನ್ನು ಪತ್ತೆ ಹಚ್ಚಲಾಗಿದೆ.
ರಾಜ್ಯ ಹೆದ್ದಾರಿಯ ಚಿಕ್ಕೋಡಿ ವಿಭಾಗದಲ್ಲಿ 29 ಸ್ಥಳಗಳು, ಹುಬ್ಬಳ್ಳಿ ನಗರದಲ್ಲಿ 15 ಸ್ಥಳಗಳು, ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ 17 ಕಡೆ ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳೆಂದು ಗುರುತಿಸಲಾಗಿದೆ.  ಇದಕ್ಕೆ ಮುಖ್ಯವಾಗಿ ರಸ್ತೆಗಳಲ್ಲಿನ ನ್ಯೂನ್ಯತೆ ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳದೇ ಇರುವುದು ಕಾರಣ ಎಂಬುದನ್ನೂ ಉಲ್ಲೇಖಿಸಲಾಗಿದೆ.
ಏನು ಮಾಡಬೇಕು?: ಗುರುತಿಸಿದ ಅಪಘಾತ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಸೂಚನಾ ಫಲಕ, ರೋಡ್ ಮಾರ್ಕಿಂಗ್, ಅಕ್ರಮ ಕಟ್ಟಡ ತೆರವು, ಬಸ್ ಸೆಲ್ಟರ್ ನಿರ್ಮಾಣ, ರಸ್ತೆ ರೇಲಿಂಗ್ ಅಥವಾ ಬ್ಯಾರಿಕೇಡ್ ಅಳವಡಿಸುವುದು, ಸೋಲಾರ್ ಲೈಟ್ ಸೇರಿದಂತೆ ಇತರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಇದನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಗಮನಕ್ಕೂ ತರಲಾಗಿದ್ದು, ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿ ನಾಲ್ಕು ತಿಂಗಳು ಕಳೆದಿದೆ. ಆದರೆ, ಇನ್ನೂ ಲೋಕೋಪಯೋಗಿ ಹಾಗೂ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧಿಕಾರಿಗಳು ಸಭೆ ನಡೆಸಿಲ್ಲ. ಸಭೆ ನಂತರವೇ ಅಭಿವೃದ್ಧಿಯ ರೂಪುರೇಷೆ ಸಿದ್ಧವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
"

ಅಪಘಾತ ಸ್ಥಳಗಳನ್ನು ಸರ್ವೇ ಮಾಡಿ ವರದಿ ಸಂಗ್ರಹಿಸಲಾಗಿದೆ. ಲೋಕೋಪಯೋಗಿ ಹಾಗೂ ನಮ್ಮ ಸಂಸ್ಥೆಯ ವಿಭಾಗವಾರು ಅಧಿಕಾರಿಗಳು ಸೇರಿ ಸಭೆ ನಡೆಸುವರು. ಇದಾದ ಬಳಿಕ ಅಭಿವೃದ್ಧಿಯ ಚಿತ್ರಣ ಸ್ಪಷ್ಟವಾಗಲಿದೆ.

— -ಪ್ರಿಯಾಂಗಾ ಎಂ., ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net