Siddaramayya ಬಿಜೆಪಿ ಸರ್ಕಾರದಲ್ಲಿ ಒಂದೇ ಒಂದು ಮನೆ ನೀಡಿಲ್ಲ
Siddaramayya ಹುಬ್ಬಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿದ್ದ 42,345 ಮನೆಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಸಭಾಪತಿ ಬಸವರಾಜ ಹೊರಟ್ಟಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ, ಸಚಿವರಾದ ಎಚ್.ಸಿ. ಮಹದೇವಪ್ಪ, ಸಂತೋಷ ಲಾಡ್, ಇತರರು ಇದ್ದರು
ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಖರ್ಗೆ ಆಕ್ರೋಶ
ಹುಬ್ಬಳ್ಳಿ: siddaramayya ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಬಡವರಿಗಾಗಿ ಮನೆ ಕಟ್ಟಿಸಿಕೊಟ್ಟಿದೆ, ಪಂಚ ಗ್ಯಾರಂಟಿ ಯೋಜನೆಗಳ ಮಧ್ಯೆಯೂ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಮಾಡುತ್ತಿದೆ. ರಾಜ್ಯ ಸರ್ಕಾರ ಬಲಿಷ್ಠವಾಗಿದೆ. ಬಿಜೆಪಿಯವರು ಐದು ವರ್ಷದಲ್ಲಿ ಒಂದೇ ಒಂದು ಮನೆ ಕೊಡಲಿಲ್ಲ, ಅವರು ಆರೋಪಿಸುವಂತೆ ಯಾವುದೇ ಆರ್ಥಿಕ ದಿವಾಳಿಯಾಗಿಲ್ಲ ಎಂಬ ಸಂದೇಶವನ್ನು ಕಾಂಗ್ರೆಸ್ ನಾಯಕರು ಸಾರಿದರು.
ಇಲ್ಲಿಯ ಮಂಟೂರ ರಸ್ತೆಯಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯದ ವಿವಿಧೆಡೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಿದ 42,345 ಮನೆಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಫಲಾನುಭವಿಗಳು ಸೇರಿ ಸುಮಾರು 1.50 ಲಕ್ಷ ಜನರು ಸಾಕ್ಷಿಯಾದರು.
ಹುಬ್ಬಳ್ಳಿಯಲ್ಲಿ ನಿರ್ಮಾಣ ಮಾಡಲಾದ 1008 ಮನೆಗಳ ಫಲಾನುಭವಿಗಳಿಗೆ ಮನೆಯ ಕೀ ಹಸ್ತಾಂತರಿಸಿ ನಂತರ ವರ್ಚುವಲ್ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳ ಫಲಾನುಭವಿಗಳಿಗೆ ಮನೆ ವಿತರಣೆ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಇದೊಂದು ಐತಿಹಾಸಿಕ ಸಮಾರಂಭ, ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ದೊಡ್ಡ ಸಾರ್ವಜನಿಕ ಕಾರ್ಯಕ್ರಮ ಆಗಿರಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಇನ್ನೂ ಏಳು ಲಕ್ಷ ಕುಟುಂಬಗಳು ಸೂರು ಇಲ್ಲ, ಕೊಳಗೇರಿ ನಿವಾಸಿಗಳು ಘನತೆ, ಗೌರವದಿಂದ ಬದುಕಬೇಕು. ನಮ್ಮ ಸರ್ಕಾರ ಇದಕ್ಕಾಗಿ ಎಲ್ಲ ಸಹಕಾರ ನೀಡಲಿದೆ. ಹಿಂದಿನ ಅವಧಿಯಲ್ಲಿ ಸಿಎಂ ಆದಾಗ ಐದು ವರ್ಷದಲ್ಲಿ 14 ಲಕ್ಷ ಮನೆ ಕಟ್ಟಿ ಕೊಡಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ವಸತಿ ಕ್ರಾಂತಿಯಾಗಿದೆ ಎಂದು ಹೇಳಿದರು.
ಒಂದು ಮನೆಗೆ 7.50 ಲಕ್ಷ ರೂ. ಅಗತ್ಯವಿದೆ. ಆದರೆ, ಪ್ರಧಾನಿ ಆವಾಸ್ ಯೋಜನೆ ಅಡಿ ಬರೀ 1.50 ಲಕ್ಷ ರೂ. ಕೇಂದ್ರ ಕೊಟ್ಟಿದೆ. ಒಟ್ಟಾರೆ ವೆಚ್ಚದಲ್ಲಿ ಶೇ. 18 ಜಿಎಸ್ಟಿ ಕಡಿತ ಮಾಡಿದ್ದರಿಂದ ಕೇಂದ್ರದ ಅನುದಾನ ಕೇವಲ 18 ಸಾವಿರ ರೂ., ಹೆಸರು ಕೇಂದ್ರದ್ದು ಆದರೆ, ಇದಕ್ಕೆ ದುಡ್ಡು ಕೊಟ್ಟಿದ್ದು ನಾವು ಎಂದು ಸಿಎಂ ಹೇಳಿದರು.
ಜೋಶಿಗೆ ಸವಾಲ್ಡ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೇ ನೀವು ಏನು ಮಾಡಿದ್ದೀರಿ? ಅಚ್ಚೆ ದಿನ್ ಎಲ್ಲಿದೆ? ವಿದೇಶದಿಂದ ಕಪ್ಪು ಹಣ ತಂದ್ರಾ? ಎಂದು ಪ್ರಶ್ನೆಗಳ ಸುರಿಮಳೆಗರೆದ ಸಿಎಂ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಮಾಡಿ ಹಣ ಕೊಡುತ್ತೇವೆ ಅಂದಿದ್ದೀರಿ, ಅಧಿಕಾರಕ್ಕೆ ಬಂದ 24 ತಾಸಿನಲ್ಲಿ ಮಹದಾಯಿ ಯೋಜನೆ ಜಾರಿ ಮಾಡುತ್ತೇವೆ ಅಂದಿದ್ದೀರಿ, ಯಾವುದೂ ಆಗಿಲ್ಲ. ಪರಿಸರ ಇಲಾಖೆ ಅನುಮೋದನೆ ಕೊಡಿಸಿದರೆ ಮಹದಾಯಿ ಯೋಜನೆಯನ್ನು ನಾಳೆಯೇ ಆರಂಭ ಮಾಡುತ್ತೇವೆ. ಜೋಶಿ ಅವರೇ ಕೊಡಿಸುತ್ತೀರಾ? ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.
ಗ್ಯಾರಂಟಿ ಯೋಜನೆಗಳಿಂದಾಗಿ ವ್ಯಕ್ತಿಗತ ವರಮಾನದಲ್ಲಿ ರಾಜ್ಯವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಖಜಾನೆ ಖಾಲಿ ಎಂದು ಹೇಗೆ ಹೇಳುತ್ತೀರಿ. ನರೇಗಾ ಯೋಜನೆ ಹೆಸರು ಬದಲಿಸಿ ಮಹಾತ್ಮ ಗಾಂಧಿ ಹತ್ಯೆ ಮಾಡಿದ್ದಾರೆ. ಜಾತಿ, ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಜನರ ಪರವಾಗಿದೆ. ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ. ಬೇಕಾದರೆ ಬಿಜೆಪಿ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಬಗ್ಗೆ ಜನರಿಗೆ ಪ್ರೀತಿ:
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಇಲ್ಲಿ ಸೇರಿರುವ ಸಂಖ್ಯಾಬಲ ನೋಡಿದರೆ ರಾಜ್ಯ ಸರ್ಕಾರವನ್ನು ಜನರು ಪ್ರೀತಿಸುತ್ತಾರೆ ಎನ್ನುವುದಕ್ಕೆ ಸಾಕ್ಷಿ. ಬಡವರಿಗೆ ಸೂರು ಒದಗಿಸುವ ಇಂಥ ಕಾರ್ಯ ಸಾಧ್ಯ ಆಗುವುದು ಕಾಂಗ್ರೆಸ್ನಿಂದ ಮಾತ್ರ. ಹಿಂದೆ ಜನತಾ ಮನೆಗಳನ್ನು ದೇವರಾಜ ಅರಸು, ಬಸವಲಿಂಗಪ್ಪ ಅವರೆಲ್ಲ ನೀಡಿದ್ದರು. 7.50 ಲಕ್ಷ ರೂ. ಮನೆಯನ್ನು ಕೇವಲ ಲಕ್ಷ ರೂ. ವಂತಿಕೆಯಲ್ಲಿ ಕೊಡುವುದು ಬೇರೆ ಯಾವುದೇ ಸರ್ಕಾರಕ್ಕೆ ಸಾಧ್ಯವಿಲ್ಲ. ಐದು ಗ್ಯಾರಂಟಿ ನೀಡಿದ್ದೇವೆ. ನೀವೇನು ಮಾಡಿದ್ದೀರಿ ಎಂದು ಬಿಜೆಪಿಯವರನ್ನು ಪ್ರಶ್ನಿಸಿದರು.
ದೇಶಕ್ಕಾಗಿಯೂ ನೀವು ಏನೂ ಮಾಡಿಲ್ಲ. ಪ್ರಧಾನಿ ಮೋದಿ ಬರೀ ಭಾಷಣ ಮಾಡುತ್ತಾರೆ. ನರೇಂದ್ರ ಮೋದಿ ಅವರು ಪುಕ್ಸಟ್ಟೆ ಕುರ್ಚಿ ಮೇಲೆ ಕುಳಿತಿದ್ದಾರೆ. ಏನಾದರೂ ಮಾಡಿದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.
ನೆಹರು, ಗಾಂಧಿ ಬೈಯುವುದೇ ಇವರ ಕೆಲಸವಾಗಿದೆ. ನರೇಗಾದಿಂದ ಕೈಗೆ ಕೆಲಸ, ಹೊಟ್ಟೆಗೆ ಅನ್ನ ಸಿಗುತ್ತಿತ್ತು. ಅದನ್ನು ಬದಲಿಸಿದ್ದು ಕಾನೂನು ಬಾಹಿರ. ಕೃಷಿ ಹಾಗೂ ಎಪಿಎಂಸಿ ಕಾಯ್ದೆಯನ್ನು ಹೇಗೆ ಕೇಂದ್ರ ಸರ್ಕಾರ ಹಿಂಪಡೆಯಿತೋ ಅದೇ ರೀತಿ ಜಿ ರಾಮ್ ಜಿ ಕಾನೂನು ವಾಪಸ್ ಪಡೆಯುವವರೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಬಿಜೆಪಿಗೆ ಏಕೆ ಸಾಧ್ಯವಾಗಿಲ್ಲ: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದಲ್ಲಿ 1.84 ಲಕ್ಷ ಮನೆಗಳನ್ನು ಬಡವರಿಗೆ ಹಂಚಿಕೆ ಮಾಡಲಾಗಿತ್ತು. ನಂತರ ಬಂದ ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ಸರ್ಕಾರದಲ್ಲಿ ಒಂದು ಮನೆಯನ್ನೂ ಕೊಡಲಿಲ್ಲ. ಬಡವರ ಮನೆಗೆ ಜಿಎಸ್ ಟಿ ಹಾಕಿದೆ. ಬಡವರಿಗೆ ದುಡ್ಡು ಹಾಕಿ ಮನೆ ಕಟ್ಟಿಸಿಕೊಳ್ಳಲು ಆಗುವುದಿಲ್ಲ ಎಂಬ ವಾಸ್ತವವನ್ನು ಸಿಎಂ ಗಮನಕ್ಕೆ ತಂದಾಗ ಸರ್ಕಾರವೇ ಮುಂದೆ ನಿಂತು ಮನೆ ಮಾಡಿ ಕೊಡುವ ಭರವಸೆ ನೀಡಿದರು. ಬಡವರ ಸೂರು ಗ್ಯಾರಂಟಿ ಸರ್ಕಾರ ಬಂದಾಗಲೇ ಆಗಿದೆ. ಇದು ಬಿಜೆಪಿ, ಜೆಡಿಎಸ್ಗೆ ಏಕೆ ಸಾಧ್ಯ ಆಗಲಿಲ್ಲ ಎಂದು ಪ್ರಶ್ನಿಸಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಮಾತನಾಡಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಸಿಎಂ ವಿಶೇಷ ಅನುದಾನದಲ್ಲಿ ಪೂರ್ಣಗೊಳಿಸಲಾಗಿದೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಒಂದೇ ಒಂದು ಮನೆ ಕೊಡಲಿಲ್ಲ. ಮನೆ ನಿರ್ಮಾಣ ಕಾಮಗಾರಿಗೆ ಸಿದ್ದರಾಮಯ್ಯ ಅವರು ಭೂಮಿಪೂಜೆ ಮಾಡಿದ್ದರು. ಇದೀಗ ಅವರೇ ಲೋಕಾರ್ಪಣೆ ಮಾಡಿದ್ದು ವಿಶೇಷ. ಇಂತಹ ಸಾಧನೆಯಿಂದ ಬಿಜೆಪಿ ಹತಾಸೆಗೊಂಡಿದೆ. ಸಹಿಸಲು ಆಗದೇ ಸುಳ್ಳು ಆರೋಪ ಮಾಡುತ್ತಿದ್ದಾರೆ. ಪ್ರೋಟೋಕಾಲ್ ಬಗ್ಗೆ ಮಾತನಾಡುವವರು ಹಿಂದೆ ಸ್ಮಾರ್ಟ್ ಸಿಟಿ ಯೋಜನೆ ಉದ್ಘಾಟನೆಯಲ್ಲಿ ಸಿಎಂ ಹೆಸರು ಹಾಕಿರಲಿಲ್ಲ ಎಂದು ಟೀಕಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ಬಡವರಿಗೆ ಉಚಿತವಾಗಿ ಸೂರು ಕಲ್ಪಿಸುವ ಅಸಾಧ್ಯವಾದ ಕಾರ್ಯವನ್ನು ಪಟ್ಟು ಹಿಡಿದು ವಸತಿ ಸಚಿವರು ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಐದು ವರ್ಷಕ್ಕೆ 3 ಲಕ್ಷ ರೂ. ನೀಡಲಾಗುತ್ತಿದೆ. ಇಂತಹ ಜನಸೇವೆಯನ್ನು ಕಾಂಗ್ರೆಸ್ ಬಿಟ್ಟರೆ ಯಾವುದೇ ಸರ್ಕಾರ ಮಾಡುವುದಿಲ್ಲ ಎಂದು ಹೇಳಿದರು.
ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಎಚ್.ಸಿ. ಮಹದೇವಪ್ಪ, ಸತೀಶ ಜಾರಕಿಹೊಳಿ, ಡಾ. ಎಂ.ಸಿ. ಸುಧಾಕರ, ಕೆ.ಎಚ್. ಮುನಿಯಪ್ಪ, ಶಾಸಕರು, ಇತರರು ಉಪಸ್ಥಿತರಿದ್ದರು.