ಹುಬ್ಬಳ್ಳಿ: bjp celebration ತಡವಾಗಿಯಾದರೂ ಪಕ್ಷ ನಿಷ್ಠೆ, ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಗುರುತಿಸಿ ಬಿಜೆಪಿಯಲ್ಲಿ ಸ್ಥಾನಮಾನ ನೀಡಲಾಗುತ್ತದೆ ಎಂಬುದಕ್ಕೆ ನೂತನವಾಗಿ ಎಂಎಲ್ಸಿ ಹಾಗೂ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಲಿಂಗರಾಜ ಪಾಟೀಲ ಹಾಗೂ ಮಾ. ನಾಗರಾಜ ಅವರೇ ಸಾಕ್ಷಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯಪಟ್ಟರು.
ಇಲ್ಲಿಯ ಅರವಿಂದನಗರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ನೂತನ ಎಂಎಲ್ಸಿ, ರಾಜ್ಯಸಭಾ ಸದಸ್ಯರಿಗೆ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಸ್ತು, ನಿಷ್ಠೆಗೆ ಇವರು ಹೆಸರಾಗಿದ್ದರು. ಇವರ ಸೇವೆಯನ್ನು ಬಳಸಿಕೊಳ್ಳಲು ಪಕ್ಷ ಬಯಸಿ ಇದೀಗ ಹೆಚ್ಚಿನ ಜವಾಬ್ದಾರಿ ನೀಡಿದೆ. ಬಿಜೆಪಿ ಕಾರ್ಯಕರ್ತರ ಪಕ್ಷ ಎನ್ನುವುದಕ್ಕೆ ಇದು ನಿದರ್ಶನ. ಇಂತಹ ವ್ಯವಸ್ಥೆ ಬೇರೆ ಪಕ್ಷಗಳಲ್ಲಿ ಕಂಡು ಬರುವುದಿಲ್ಲ ಎಂದರು.
ಬಿಜೆಪಿ ಯಾವುದೇ ಪಕ್ಷಗಳನ್ನು ಒಡೆಯುವ ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್, ಟಿಎಂಸಿ ಸೇರಿದಂತೆ ಅನೇಕ ಪಕ್ಷಗಳಲ್ಲಿನ ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತಕ್ಕೆ ಬೇಸತ್ತು ಅಲ್ಲಿ ಯಾವುದೇ ಭವಿಷ್ಯ ಕಾಣುತ್ತಿಲ್ಲ ಎಂದು ನಿರ್ಧರಿಸಿ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ ಎಂದರು.
2028ಕ್ಕೆ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಆಗ ಇನ್ನಷ್ಟು ಕಾರ್ಯಕರ್ತರಿಗೆ ಅವಕಾಶಗಳು ಸಿಗುತ್ತವೆ. ಹಾಗಾಗಿ ಯಾರೂ ಬೇಸರ ಮಾಡಿಕೊಳ್ಳಬಾರದು. ಪಕ್ಷ ನಿಷ್ಠೆ ತೋರಬೇಕು ಎಂದು ಸಲಹೆ ನೀಡಿದರು.
ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಸ್.ವಿ. ಸಂಕನೂರ, ಪ್ರದಿಪ ಶೆಟ್ಟರ್ ಮಾತನಾಡಿದರು.
ಕಾರವಾರ ರಸ್ತೆಯಿಂದ ಪಕ್ಷದ ಕಚೇರಿ ವರೆಗೆ ತೆರೆದ ವಾಹನದಲ್ಲಿ ಲಿಂಗರಾಜ ಪಾಟೀಲ, ಮಾ. ನಾಗರಾಜ ಅವರನ್ನು ಮೆರವಣಿಗೆ ಮೂಲಕ ಕರೆ ತರಲಾಯಿತು.
ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚವ್ಹಾಣ, ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಅನೂಪ ಬಿಜವಾಡ, ಸಂತೋಷ ವೆರ್ಣೇಕರ, ಅಶೋಕ ಕಾಟವೆ, ವೆಂಕಟೇಶ ಕಾಟವೆ, ಕೃಷ್ಣ ಗಂಡಗಾಳೇಕರ, ರಂಗಾ ಬದ್ದಿ ಇತರರು ಇದ್ದರು.