ಗೃಹಲಕ್ಷ್ಮೀ ಫಲಾನುಭವಿಗಳಿಗೆ ಬಯೋಮೆಟ್ರಿಕ್​ ಮರುಪರಿಶೀಲನೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ
Published on
ಧಾರವಾಡ: ರಾಜ್ಯ ಸರ್ಕಾರವು ಗೃಹಲಕ್ಷ್ಮೀ ಯೋಜನೆಯಡಿ ಅರ್ಹ ಫಲಾನುಭವಿಗಳ ಬಯೋಮೆಟ್ರಿಕ್​ ದೃಢೀಕರಿಸುವ ಮೂಲಕ ಮರುಪರಿಶೀಲನೆ ನಡೆಸಲು ಪ್ರಮಾಣಿತ ಕಾರ್ಯಾಚರಣಾ ವಿಧಾನ ಜಾರಿಗೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್​ ಆರ್​. ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಭವನದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಮಾತನಾಡಿದರು.
ಗೃಹಲಕ್ಷ್ಮೀ ಫಲಾನುಭವಿಗಳ ವಿವರಗಳನ್ನು ಪರಿಶೀಲಿಸಿ, ಅವರ ಪ್ರಸ್ತುತ ಸ್ಥಿತಿ ದೃಢಿಕರಿಸುವ ಉದ್ದೇಶದಿಂದ ಫಲಾನುಭವಿಗಳ ಮರುಪರಿಶೀಲನೆ ಕಾರ್ಯವನ್ನು ನಿಯೋಜಿತ ಗಣತಿದಾರರು ಹಾಗೂ ಗ್ಯಾರಂಟಿ ಸಮಿತಿ ಸದಸ್ಯರು ಮನೆ-ಮನೆಗೆ ಭೇಟಿ ನೀಡುವರು. ಮೊಬೈಲ್​ ಅಪ್ಲಿಕೇಶನ್​ ಜಿಪಿಎಸ್​ ಗುರುತಿನೊಂದಿಗೆ ಛಾಯಾಚಿತ್ರದ ಸಾಕ್ಷ್ಯ, ಆಧಾರ್​ ಆಧಾರಿತ ಮುಖದ ದೃಢೀಕರಣ ಹಾಗೂ ಪರ್ಯಾಯ ಸಹಾಯಕ ವ್ಯವಸ್ಥೆಯಾಗಿ ಬೆಂಗಳೂರು ಒನ್​, ಕರ್ನಾಟಕ ಒನ್​, ಗ್ರಾಮ ಒನ್​ ಇತರೆ ನಿಗದಿತ ಕೇಂದ್ರಗಳ ಸೇವೆಯನ್ನು ಬಳಸಲಾಗುವುದು ಎಂದು ಹೇಳಿದರು.
ಗೃಹಲಕ್ಷ್ಮೀ ಯೋಜನೆಯ ಅರ್ಹ ಫಲಾನುಭವಿಗಳ ಮರುಪರಿಶೀಲನೆ ಕಾರ್ಯವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೈಗೊಂಡಿದ್ದು, ಒಂದು ತಿಂಗಳೊಳಗೆ ರ್ಪೂಣಗೊಳಿಸಲು ಸೂಚಿಸಲಾಗಿದೆ. ಮರುಪರಿಶೀಲನೆ ಪ್ರಕ್ರಿಯೆಯ ತಾಂತ್ರಿಕ ಪಾಲುದಾರ ಸಂಸ್ಥೆಯಾಗಿ ಪ್ರಜಾಸೇವಾ ಇಲಾಖೆಯ ಅಧೀನದ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.
ಮರುಪರಿಶೀಲನೆ ಈಗಾಗಲೇ ಗುರುತಿಸಲ್ಪಟ್ಟಿರುವ ಅಸ್ತಿತ್ವದಲ್ಲಿರುವ ಫಲಾನುಭವಿಗಳಿಗೆ ಮಾತ್ರ ಸೀಮಿತವಾಗಿದ್ದು, ಹೊಸ ನೋಂದಣಿಯನ್ನು ಈ ಕಾರ್ಯಾಚರಣೆ ವ್ಯಾಪ್ತಿಗೆ ಒಳಪಡಿಸಲಾಗುವುದಿಲ್ಲ ಎಂದರು.
ಇಲಾಖೆಯ ವಿವಿಧ ಯೋಜನೆಗಳಾದ ಸಖಿ ಒನ್​ ಸ್ಟಾಪ್​ ಸೆಂಟರ್​, ಬೇಟಿ ಬಚಾಮೋ ಭೇಟಿ ಪಡಮೋ, ಶಕ್ತಿ ಸದನ, ಜಿಲ್ಲಾ ಮಹಿಳಾ ಸಬಲೀಕರಣ ಟಕ, ಸಖಿ ನಿವಾಸ ಯೋಜನೆ, ಪ್ರಧಾನಮಂತ್ರಿ ಮಾತೃ ವಂದನಾ, ಅಂಗನವಾಡಿ ಕಂ. ಕ್ರಶ್​, ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ, ಸಾಂತ್ವನ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ, ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ ಹಾಗೂ ರಾಜ್ಯ ಮಹಿಳಾ ನಿಲಯ, ಸ್ತ್ರೀ ಶಕ್ತಿ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ನಡೆಯಿತು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಸ್​.ಆರ್​. ಪಾಟೀಲ, ಮಹಾನಗರ ಪಾಲಿಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ ಹಳಿಯಾಳ, ಹಿರಿಯ ಸಿವ್ಹಿಲ್​ ನ್ಯಾಯಾಧೀಶ ಅಲ್ಲಪ್ಪ ಬಡಿಗೇರ, ಇಲಾಖೆಯ ಉಪನಿರ್ದೇಶಕ ವೀರಣ್ಣಗೌಡ ಪಾಟೀಲ ಹಾಗೂ ವಿವಿಧ ಯೋಜನೆಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net