ಹುಬ್ಬಳ್ಳಿ: ಯೋಗದಂತೆ ಭರತನಾಟ್ಯಕ್ಕೂ bharatanatyam ವಿಶ್ವಮಾನ್ಯತೆ ಸಿಗಬೇಕು. ಈ ನಿಟ್ಟಿನಲ್ಲಿ ನಮ್ಮ ಸನಾತನ ಧರ್ಮದ ಸಂಸ್ಕೃತಿ, ಪರಂಪರೆ ವಿಶ್ವಭೂಪಟದಲ್ಲಿ ಮಿನುಗಬೇಕು ಎಂದು ಮೈಸೂರಿನ ಹಿರಿಯ ವಿದ್ವಾಂಸ ಪ್ರೊ. ರಾಮಮೂರ್ತಿರಾವ್ ಅಭಿಪ್ರಾಯಪಟ್ಟರು.
ಅಭಿನಯ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಅವ್ನಿ ಶ್ರೀನಿವಾಸ ಜೋಶಿ, ಆರ‌್ನಾ ಕುರುಗೊದಿಯವರ, ಆರಾಧ್ಯ ಮೂಗಬಸವ ಅವರ ರಂಗಾರೋಹಣ ಭರತನಾಟ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅನಾದಿ ಕಾಲದಿಂದಲೂ ನಮ್ಮ ಭಾರತೀಯ ಕಲೆ, ಸಂಸ್ಕೃತಿ, ಸಾಹಿತ್ಯ ಮೇಲ್ಮುಖ ಹೊಂದಿವೆ. ಅದರಲ್ಲೂ ಭರತನಾಟ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ರಾಜ-ಮಹಾರಾಜರ ಕಾಲದಲ್ಲಿ ರಾಣಿಯರು ತಮ್ಮ ಅರಮನೆಗಳಲ್ಲಿ ಭರತನಾಟ್ಯ ಕಲಿಯುತ್ತಿದ್ದರು. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯ ಆಧಾರವೆಂಬುದು ಮನವರಿಕೆಯಾಗಿತ್ತು. ಅಲ್ಲದೆ ರೋಗನಿರೋಧಕ ಶಕ್ತಿಯನ್ನೂ ನೀಡುತ್ತಿದೆ ಎಂಬುದು ಗೊತ್ತಿತ್ತು ಎಂದು ವಿವರಿಸಿದರು.
ಕೆಎಂಸಿಆರ್‌ಐ ನಿರ್ದೇಶಕ ಡಾ.ಕೆ.ಎಫ್. ಕಮ್ಮಾರ ಮಾತನಾಡಿ, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೂ ಒತ್ತು ಕೊಡುವ ಕೆಲಸ ಇಂದು ನಡೆಯಬೇಕು. ಶೇ. 40ರಷ್ಟು ಮಕ್ಕಳು ಮನೋರೋಗದಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ಪಠ್ಯೇತರ ಚಟುವಟಿಕೆ ಇಲ್ಲದಿರುವುದು ಎಂದು ವಿಶ್ಲೇಷಿಸಿದರು.
ಅಭಿನಯ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥಾಪಕಿ ಹಾಗೂ ಭರತನಾಟ್ಯ ವಿದುಷಿ ಡಾ. ಸೀಮಾ ಉಪಾಧ್ಯಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಟುಂಬದಲ್ಲಿ ಪ್ರೋತ್ಸಾಹ ಸಿಕ್ಕರೆ ಇನ್ನಷ್ಟು ಎತ್ತರಕ್ಕೆ ಬೆಳೆಯಬಹುದು ಎಂಬುದಕ್ಕೆ ನಾನೇ ಸಾಕ್ಷಿ. ಹಿಂದೆ ಗುರು, ಮುಂದೆ ಗುರಿ ಇಟ್ಟುಕೊಂಡು ಮುನ್ನಡೆಯಬೇಕು. ಹಾಗಾದರೆ ಯಶಸ್ಸು ಸಿಗುತ್ತದೆ ಎಂದರು.
ಅವ್ನಿ ಶ್ರೀನಿವಾಸ ಜೋಶಿ, ಆರ‌್ನಾ ಕುರುಗೊದಿಯವರ, ಆರಾಧ್ಯ ಮೂಗಬಸವ ಅವರ ಭರತನಾಟ್ಯವು ನೋಡುಗರ ಹೃನ್ಮನ ಸೆಳೆಯಿತು. ಭರತನಾಟ್ಯ ಸಂಪ್ರದಾಯದ ಮಲ್ಹಾರಿ ನೃತ್ಯದೊಂದಿಗೆ ಆರಂಭಗೊಂಡು, ನಂತರ ವೈವಿಧ್ಯಮಯ ನೃತ್ಯಪ್ರಸ್ತುತಿ ನಡೆಸಿಕೊಟ್ಟರು. ತಿಲ್ಲಾನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ವಿದುಷಿ ವಾಣಿ ಉಡುಪಿ ಗಾಯನ, ಪಂಚಮ ಉಪಾಧ್ಯಾಯ ಮೃದಂಗ, ಡಾ. ಗೋಪಿಕೃಷ್ಣ ನಂಬುದಿಯಾರ ರಿದಂ ಪ್ಯಾಡ್, ವೈಭವ ಭಟ್ ಕೊಳಲು ವಾದನವು ಸಂಗೀತಪ್ರಿಯರ ಮನಸ್ಸು ಹಿಡಿದಿಟ್ಟವು.
ಕೆಎಂಸಿಆರ್‌ಐ ಪ್ರಾಚಾರ್ಯ ಡಾ. ಸೂರ್ಯಕಾಂತ ಕಲ್ಲೂರಾಯ, ವೀಣಾ ದೇವಿ, ಪದ್ಮಶ್ರೀ ಡಾ. ಎಂ.ಎಂ. ಜೋಶಿ, ಡಾ. ಶ್ರೀನಿವಾಸ ಜೋಶಿ, ಡಾ. ದೀಪ್ತಿ ಜೋಶಿ, ಡಾ. ಮಹೇಶ ಕುರುಗೊದಿಯವರ, ಪ್ರಿಯಾ ಕುರುಗೊದಿಯವರ, ಕಿರಣ ಮೂಗಬಸವ, ಶಿಲ್ಪಾ ಮೂಗಬಸವ, ಇತರರಿದ್ದರು.