ಧಾರವಾಡ: ಅನುಭವ ಮಂಟಪ ಸಂಘ ಹಾಗೂ ಬಸವಶಾಂತಿ ಮಿಷನ್ ಟ್ರಸ್ಟ್ ಸಹಯೋಗದಲ್ಲಿ ಯಾಲಕ್ಕಿ ಶೆಟ್ಟರ್ ಕಾಲನಿಯ ಬಸವಶಾಂತಿ ಮಿಷನ್ ಟ್ರಸ್ಟ್ನಲ್ಲಿ ಏ. 20ರಂದು ಸಂಜೆ 5.30ಕ್ಕೆ ವಿಶ್ವಗುರು ಬಸವೇಶ್ವರ ಮತ್ತು ವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತ್ಯುತ್ಸವ ಆಯೋಜಿಸಲಾಗಿದೆ ಎಂದು ಸಂಘದ ಮಹಿಳಾ ವೇದಿಕೆ ಮುಖ್ಯಸ್ಥೆ ಡಾ. ವೀಣಾ ಬಿರಾದಾರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಚನ ಸಾಹಿತ್ಯ, ಶರಣ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಈ ಉಭಯ ಶರಣರ ಉತ್ಸವ ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.
ಮಧ್ಯಾಹ್ನ 3.30ಕ್ಕೆ ಅಲಂಕೃತ ರಥದಲ್ಲಿ ಬಸವೇಶ್ವರ-ಅಕ್ಕಮದಾವಿ ಭಾವಚಿತ್ರವಿರುವ ಭವ್ಯ ಮೆರವಣಿಗೆ ನಡೆಯಲಿದೆ. ಸಪ್ತಗಿರಿ ಲೇಔಟ್ ಉದ್ಯಾನದಿಂದ ಮೆರವಣಿಗೆ ಆರಂಭವಾಗಿ ಶಂಕರಮಠ, ಕರಿಯಮ್ಮಗುಡಿ, ಹುಲ್ಲೂರ ಬಿಲ್ಡಿಂಗ್ ಮಾರ್ಗವಾಗಿ ಬಸವಶಾಂತಿ ಮಿಷನ್ ಟ್ರಸ್ಟ್ ತಲುಪಲಿದೆ ಎಂದು ಹೇಳಿದರು.
ಶಾಲಾ ಮಕ್ಕಳು ಶರಣರ ಛದ್ಮವೇಷ ಧರಿಸುವ ಜತೆಗೆ ವಚನ ಹೊತ್ತಿಗೆ ತಲೆಯ ಮೇಲೆ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೋಲಾಟ ಸೇರಿ ವಿವಿಧ ಜನಪದ ವಾದ್ಯಮೇಳ ಭಾಗವಹಿಸುವವು. ವಿವಿಧ ತಂಡಗಳಿಂದ ವಚನ ಗಾಯನ, ನೃತ್ಯಗಳು ಜರುಗಲಿವೆ ಎಂದರು.
ಸಂಜೆ 5.30ಕ್ಕೆ ನಡೆಯುವ ಜಯಂತ್ಯುತ್ಸವವನ್ನು ಶಾಸಕ ಅರವಿಂದ ಬೆಲ್ಲದ ಉದ್ಘಾಟಿಸುವರು. ಸಿಎಸ್‌ಐ ಕಾಲೇಜಿನ ಪ್ರಾಚಾರ್ಯ ಪ್ರೊ. ಶಂಭು ಹೆಗಡಾಳ ಅತಿಥಿಯಾಗಿ ಪಾಲ್ಗೊಳ್ಳುವರು. ಅನುಭವ ಮಂಟಪದ ಅಧ್ಯಕ್ಷ ವಿಜಯ ಅಗಡಿ ಅಧ್ಯಕ್ಷತೆ ವಹಿಸುವರು. ಬಸವಶಾಂತಿ ಮಿಷನ್ ಅಧ್ಯಕ್ಷ ಮಹಾದೇವ ಹೊರಟ್ಟಿ ಭಾಗವಹಿಸುವರು.
ಅನುಭವ ಮಂಟಪ ಸಂಘದ ಅಧ್ಯಕ್ಷ ವಿಜಯ ಅಗಡಿ ಮಾತನಾಡಿ, ಗಾಯಕ ಡಾ. ಮೃತ್ಯುಂಜಯ ಶೆಟ್ಟರ್ ಮತ್ತು ಶ್ರೀ ಸಾಯಿ ಪಿಯು ಕಾಲೇಜಿನ ಅಧ್ಯಕ್ಷೆ ಡಾ. ವೀಣಾ ಬಿರಾದಾರ ಅವರಿಗೆ ಸನ್ಮಾನ ಕಾರ್ಯಕ್ರಮವಿದೆ. ಎಸ್‌ಎಲ್‌ಎಲ್‌ಸಿ-ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನಿಡಲಿದೆ ಎಂದರು.